ಕದ್ದ ರಾಮ ಮಂದಿರ ದೇಣಿಗೆ ಹಣ ಷೇರುಗಳಲ್ಲಿ ಹೂಡಿಕೆ: 30 ಬ್ಯಾಂಕ್ ಖಾತೆಗಳ ಸ್ಥಗಿತ; ತನಿಖೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ!

ಅಯೋಧ್ಯೆ ಪೊಲೀಸರು ಆರೋಪಿಗಳ ಮನೆಗಳಲ್ಲಿ ಮತ್ತೊಮ್ಮೆ ಶೋಧ ನಡೆಸಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ನಿನ್ನೆ ಪೊಲೀಸರು ಆರೋಪಿ ಅನುಕಲ್ಪ್ ಮಿಶ್ರಾನನ್ನು ಆತನ ಮನೆಗೆ ಕರೆದೊಯ್ದು ಶೋಧ ನಡೆಸಿ, ಕುಟುಂಬ ಸದಸ್ಯರನ್ನು ಸಹ ವಿಚಾರಣೆಗೊಳಪಡಿಸಿದರು.
Ayodhya Rama Mandir temple
ರಾಮ ಮಂದಿರ ದೇವಸ್ಥಾನ ಅಯೋಧ್ಯೆ
Updated on

ಲಖನೌ: ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಕಳವಾದ ಹಣದ ಒಂದು ಭಾಗವನ್ನು ಆರೋಪಿಗಳು ಷೇರು ಮಾರುಕಟ್ಟೆ ಹಾಗೂ ಇತರ ಹಣಕಾಸು ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹಣದ ಮೂಲವನ್ನು ಮರೆಮಾಚುವುದಷ್ಟೇ ಅಲ್ಲದೆ, ಅದರಿಂದ ಲಾಭ ಗಳಿಸುವ ಉದ್ದೇಶವೂ ಆರೋಪಿಗಳದ್ದಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಅಯೋಧ್ಯೆ ಪೊಲೀಸರು ಆರೋಪಿಗಳ ಮನೆಗಳಲ್ಲಿ ಮತ್ತೊಮ್ಮೆ ಶೋಧ ನಡೆಸಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ತನಿಖೆಯ ಮಾಹಿತಿ ಬಲ್ಲ ಮೂಲಗಳ ಪ್ರಕಾರ, ನಿನ್ನೆ ಪೊಲೀಸರು ಆರೋಪಿ ಅನುಕಲ್ಪ್ ಮಿಶ್ರಾ ಅವರನ್ನು ಅವರ ಮನೆಗೆ ಕರೆದೊಯ್ದು ಶೋಧ ನಡೆಸಿ, ಕುಟುಂಬ ಸದಸ್ಯರನ್ನು ಸಹ ವಿಚಾರಣೆಗೊಳಪಡಿಸಿದರು.

ವಿಚಾರಣೆ ವೇಳೆ, ತಾನು ಹಾಗೂ ಸಹ ಆರೋಪಿ ಅವಿನಾಶ್ ಶುಕ್ಲಾ ಕಳವಾದ ದೇಣಿಗೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಗಿ ಅನುಕಲ್ಪ್ ಮಿಶ್ರಾ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಅವರು ಬಡ್ಡಿಗೆ ಹಣ ನೀಡುವುದರ ಜೊತೆಗೆ, ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ, ಬಳಿಕ ಅದನ್ನು ತಮ್ಮ ಖಾತೆಗಳಿಗೆ ಮರಳಿ ವರ್ಗಾಯಿಸುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾನೆ.

Ayodhya Rama Mandir temple
ಅಯೋಧ್ಯೆ ರಾಮಮಂದಿರ ಬಳಿಕ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನ ಆರೋಪ, ತನಿಖೆಗೆ ಆದೇಶ!

ಬುಧವಾರ ಪೊಲೀಸರು ಲವ್‌ಕುಶ್ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಅವರನ್ನು ಸಹ ಅವರ ಮನೆಗಳಿಗೆ ಕರೆದೊಯ್ದು ಶೋಧ ನಡೆಸಿದ್ದರು. ಮೂವರು ಆರೋಪಿಗಳನ್ನೂ 40 ಗಂಟೆಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಈ ಶೋಧ ಕಾರ್ಯವನ್ನು ವಿಧಿ ವಿಜ್ಞಾನ ತಜ್ಞರು ಹಾಗೂ ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹಣದ ಜಾಡು ಪತ್ತೆಹಚ್ಚಲು ನೆರವಾಗುವ ಎಲೆಕ್ಟ್ರಾನಿಕ್ ಸಾಧನಗಳು, ಹೂಡಿಕೆ ದಾಖಲೆಗಳು ಹಾಗೂ ಇತರ ಹಣಕಾಸು ಸಂಬಂಧಿತ ಸಾಕ್ಷ್ಯಗಳನ್ನು ಶೋಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಹಾಗೂ ಅವರ ಸಂಬಂಧಿಕರ ಹೆಸರಿನ 30 ಬ್ಯಾಂಕ್ ಖಾತೆಗಳಲ್ಲಿ ಘೋಷಿತ ಆದಾಯಕ್ಕೆ ಹೊಂದಿಕೆಯಾಗದ ವಹಿವಾಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮತ್ತೊಂದು ಮೂಲ ತಿಳಿಸಿದೆ. ಆರೋಪಿಗಳ ಬಳಿಯಿಂದ ನಕಲಿ ದೇಣಿಗೆ ರಸೀದಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Ayodhya Rama Mandir temple
ಅಯೋಧ್ಯೆ ದೇಣಿಗೆ ಲೂಟಿ: FIR ಬೆನ್ನಲ್ಲೇ ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಹಣಕಾಸು ತನಿಖಾಧಿಕಾರಿಗಳು ಬ್ಯಾಂಕ್ ವಹಿವಾಟುಗಳನ್ನು ಷೇರು ಮಾರುಕಟ್ಟೆ ಹೂಡಿಕೆಗಳು, ಆಸ್ತಿ ಖರೀದಿಗಳು ಹಾಗೂ ವಶಪಡಿಸಿಕೊಂಡ ನಗದುಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸುತ್ತಿದ್ದಾರೆ. ಕಳವಾದ ಹಣವನ್ನು ಹೂಡಿಕೆ ಮಾಡುವ ಮೊದಲು ಅಥವಾ ವೈಯಕ್ತಿಕ ಬಳಕೆಗೆ ಹಿಂಪಡೆಯುವ ಮೊದಲು ಈ ಖಾತೆಗಳನ್ನು ಹಣ ಸ್ವೀಕರಿಸಲು, ವರ್ಗಾಯಿಸಲು ಅಥವಾ ತಾತ್ಕಾಲಿಕವಾಗಿ ಇರಿಸಿಡಲು ಬಳಸಲಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಆರೋಪಿಗಳು ದೇವಸ್ಥಾನದ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ದುರುಪಯೋಗಪಡಿಸಿಕೊಂಡಿದ್ದರು. ಪತ್ತೆಯಾಗದಂತೆ ನೋಡಿಕೊಳ್ಳಲು ಎಣಿಕೆ ವೇಳೆ ಸಣ್ಣ ಪ್ರಮಾಣದಲ್ಲಿ ನಗದು ಹಣವನ್ನು ತೆಗೆದುಹಾಕಲಾಗುತ್ತಿತ್ತು. ಹಣವನ್ನು ತಕ್ಷಣವೇ ಖರ್ಚು ಮಾಡುವ ಬದಲು, ಅದನ್ನು ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಎಚ್ಚರಿಕೆಯ ವಿಧಾನವನ್ನು ಆರೋಪಿಗಳು ಅನುಸರಿಸಿದ್ದರು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.

ತನಿಖೆ ಈಗ ಕೇವಲ ಕಳವಾದ ಹಣವನ್ನು ವಶಪಡಿಸಿಕೊಳ್ಳುವುದಕ್ಕೆ ಸೀಮಿತವಾಗಿಲ್ಲ. ಹಣ ಎಲ್ಲಿಗೆ ಹೋಗಿತು, ಅದನ್ನು ಹೇಗೆ ಹೂಡಿಕೆ ಮಾಡಲಾಯಿತು ಹಾಗೂ ಕೊನೆಯದಾಗಿ ಅದರ ಲಾಭ ಯಾರಿಗೆ ದೊರೆಯಿತು ಎಂಬ ಹಣದ ಜಾಡು ಪತ್ತೆಹಚ್ಚುವತ್ತ ತನಿಖೆ ಕೇಂದ್ರೀಕೃತವಾಗಿದೆ.

ಆರೋಪಿಗಳು ಒಟ್ಟಾರೆ ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದರು ಎಂಬುದನ್ನು ನಿರ್ಧರಿಸಲು ಹಣಕಾಸು ತಜ್ಞರ ಸೇವೆಯನ್ನೂ ಪಡೆಯಲಾಗಿದೆ. ಬ್ರೋಕರೇಜ್ ಖಾತೆಗಳು, ಷೇರು ವಹಿವಾಟಿನ ವಿವರಗಳು, ಹೂಡಿಕೆಗೆ ಬಳಸಲಾದ ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಡಿಜಿಟಲ್ ಪಾವತಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಹೂಡಿಕೆಗಳಿಂದ ಬಂದ ಲಾಭವನ್ನು ಹಿಂಪಡೆಯಲಾಗಿದೆಯೇ, ಮರುಹೂಡಿಕೆ ಮಾಡಲಾಗಿದೆಯೇ ಅಥವಾ ಇತರ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆಯೇ ಎಂಬುದನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ತನಿಖೆಯಲ್ಲಿ, ಹಲವಾರು ಆರೋಪಿಗಳು ತಮ್ಮ ತಿಳಿದಿರುವ ಆದಾಯದ ಮೂಲಗಳಿಗೆ ಹೊಂದಿಕೆಯಾಗದ ಪ್ರಮಾಣದಲ್ಲಿ ಆಸ್ತಿಗಳನ್ನು ಕೂಡ ಸಂಗ್ರಹಿಸಿರುವುದು ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com