'ಹೀಗೆ ಮುಂದುವರಿದರೆ ಬಟಾಬಯಲು ಮಾಡುತ್ತೇವೆ': ವಿದೇಶಿ ಪ್ರಜೆ ಜಾಮೀನು ಅರ್ಜಿ ವಿರೋಧಿಸಿದ ಮಹಾರಾಷ್ಟ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾ ಮತ್ತು ಶೀಲ್ ನಾಗು ಅವರಿದ್ದ ಪೀಠವು ಜಾಮೀನು ಕೋರಿ ವಿದೇಶಿ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿತ್ತು.
Supreme Court
ಸುಪ್ರೀಂ ಕೋರ್ಟ್
Updated on

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಯನ್ನು ತ್ವರಿತಗೊಳಿಸದ ಆದರೆ, ಜಾಮೀನು ಅರ್ಜಿಯನ್ನು ವಿರೋಧಿಸಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಇದು ಹೀಗೆಯೇ ಮುಂದುವರಿದರೆ, ರಾಜ್ಯದ ನಡವಳಿಕೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾ ಮತ್ತು ಶೀಲ್ ನಾಗು ಅವರಿದ್ದ ಪೀಠವು ಜಾಮೀನು ಕೋರಿ ವಿದೇಶಿ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿತ್ತು.

'ಪ್ರತಿದಿನ ಮಹಾರಾಷ್ಟ್ರದಿಂದ ಇಂತಹ ಪ್ರಕರಣಗಳು ನಮ್ಮ ಮುಂದೆ ಬರುತ್ತವೆ. ನೀವು ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸುತ್ತೀರಿ, ಆದರೆ ವಿಚಾರಣೆಯನ್ನು ತ್ವರಿತಗೊಳಿಸಲು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಾವು ಪ್ರಕರಣವನ್ನು ಪರಿಶೀಲಿಸಿದಾಗ, ಸಾಕ್ಷ್ಯಗಳು ದುರ್ಬಲವಾಗಿರುವುದು ಕಂಡುಬರುತ್ತದೆ. ನಾವು ನಿಮ್ಮನ್ನು (ರಾಜ್ಯ ಸರ್ಕಾರವನ್ನು) ಸಾರ್ವಜನಿಕವಾಗಿ ಬಟಾಬಯಲು ಮಾಡುತ್ತೇವೆ' ಎಂದು ನ್ಯಾಯಪೀಠ ಹೇಳಿತು.

ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯು, ತಾನು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದೇನೆ ಮತ್ತು ಪ್ರಕರಣವು ವಿಚಾರಣಾ ನ್ಯಾಯಾಲಯದ ಮುಂದೆ 86 ಬಾರಿ ಬಂದಿತಾದರೂ, ವಿಚಾರಣೆಯು ಇನ್ನೂ ಪೂರ್ಣಗೊಂಡಿಲ್ಲ. 86 ವಿಚಾರಣೆಗಳ ಪೈಕಿ 53 ಬಾರಿ ತನ್ನನ್ನು ಜೈಲಿನಿಂದ ವಿಚಾರಣಾ ನ್ಯಾಯಾಲಯಕ್ಕೆ ಕರೆತರಲಾಗಿರಲಿಲ್ಲ ಎಂದು ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು.

ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸದಿರುವ ಮೂಲಕ ಮಹಾರಾಷ್ಟ್ರವು ಗಂಭೀರ ಲೋಪವೆಸಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

Supreme Court
ಸುಪ್ರೀಂಕೋರ್ಟ್ ನಲ್ಲಿ ಹೈಡ್ರಾಮ: ಕೋರ್ಟ್ ಹಾಲ್ ನಲ್ಲಿ ಕಾಗದ ಪತ್ರ ಎಸೆದು, CJI ನಿಂದಿಸಿದ ದೂರುದಾರ!

'ನಮಗೆ ಮುಜುಗರವಾಗುತ್ತಿದೆ. ಆರೋಪಿಯು ತ್ವರಿತ ವಿಚಾರಣೆಗೆ ಅರ್ಹನಾಗಿದ್ದರೂ, ಕಳೆದ ನಾಲ್ಕು ವರ್ಷಗಳಲ್ಲಿ 34 ಸಾಕ್ಷಿಗಳ ಪೈಕಿ ಕೇವಲ ಇಬ್ಬರ ವಿಚಾರಣೆ ಮಾತ್ರ ನಡೆದಿದೆ' ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯಲ್ಲಿನ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿತು.

'ಜಾಮೀನು ಅರ್ಜಿಗಳನ್ನು ರಾಜ್ಯವು ತೀವ್ರವಾಗಿ ವಿರೋಧಿಸುವಾಗ, ವಿಚಾರಣೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯೂ ಅದರ ಮೇಲಿರುತ್ತದೆ. ಆದರೆ, ಆ ನಿಟ್ಟಿನಲ್ಲಿ ರಾಜ್ಯವು ವಿಫಲವಾಗಿದೆ ಎಂದು ಕಂಡುಬರುತ್ತಿದೆ' ಎಂದು ಪೀಠವು ತಿಳಿಸಿತು.

ರಾಜ್ಯವು ಈಗ ವಿಚಾರಣಾ ನ್ಯಾಯಾಲಯಗಳಲ್ಲಿ ನಡೆಯುವ ಪ್ರತಿಯೊಂದು ವಿಚಾರಣೆಯ ದಿನಾಂಕದಂದು ಎಲ್ಲ ಆರೋಪಿಗಳನ್ನು ಹಾಜರುಪಡಿಸುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಆದಾಗ್ಯೂ, ವಿಚಾರಣೆಗಳನ್ನು ತ್ವರಿತಗೊಳಿಸುವ ಕುರಿತು ರಾಜ್ಯಗಳು ನಿರ್ದಿಷ್ಟ ನೀತಿಯನ್ನು ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

'ವಾರಕ್ಕೆ ಕನಿಷ್ಠ ನಾಲ್ವರು ಸಾಕ್ಷಿಗಳ ವಿಚಾರಣೆಯಾಗಲಿ ಮತ್ತು ಈ ಆದೇಶದ ಪ್ರತಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಇರಿಸಬೇಕು. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ, ಇದೇ ರೀತಿಯ ಕಠಿಣ ಆದೇಶಗಳನ್ನು ಹೊರಡಿಸಲಾಗುವುದು' ಎಂದು ನ್ಯಾಯಪೀಠ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com