

ನವದೆಹಲಿ: ಪ್ರಧಾನ ಮಂತ್ರಿ ಕಾರ್ಯಾಲಯದ (Prime Minister's Office) ಹಿರಿಯ ಅಧಿಕಾರಿಯಂತೆ ನಟಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಜಮ್ಮು ಮೂಲದ ವಿಜಯ್ ಗುಪ್ತಾ (Vijay Gupta) ಅವರ ಜಾಮೀನು ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು (Delhi Court) ವಜಾ ಮಾಡಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಪ್ರಕರಣ?
ಜಮ್ಮು ಮೂಲದ, ಯಂಗ್ ಬೈಟ್ಸ್ ಎಂಬ ಸಂಸ್ಥೆಯ ಮಾಲೀಕನಾದ ವಿಜಯ್ ಗುಪ್ತಾ, 2016 ಮತ್ತು 2026 ರ ನಡುವಿನ ಅವಧಿಯಲ್ಲಿ ಬರೋಬ್ಬರಿ 26 ಬಾರಿ ವಿದೇಶಿ ಪ್ರವಾಸಗಳನ್ನು ಮಾಡಿದ್ದಾನೆ. ವಿಶೇಷವೆಂದರೆ, ದೇಶದ ಪ್ರಧಾನಮಂತ್ರಿಯವರು ವಿದೇಶ ಪ್ರವಾಸ ಕೈಗೊಳ್ಳುವ ಸಮಯದಲ್ಲೇ ಈತನೂ ಆಯಾ ದೇಶಗಳಿಗೆ ಭೇಟಿ ನೀಡುತ್ತಿದ್ದನು. ಅಲ್ಲಿನ ಹಿರಿಯ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ಭಾರತಕ್ಕೆ ಮರಳಿದ ಬಳಿಕ ಆ ಫೋಟೋಗಳನ್ನು ತೋರಿಸಿ ಜನರನ್ನು ವಂಚಿಸಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದನು ಎನ್ನಲಾಗಿದೆ.
ಹಾಗಾಗಿ, ಕಳೆದ ಮೇ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತು. ಆದರೆ, ಈತ ತನಗಿರುವ ಹೃದಯ ಕಾಯಿಲೆಯ ನೆಪವನ್ನೊಡ್ಡಿ ಜಾಮೀನು ಪಡೆಯಲು ಯತ್ನಿಸಿದ್ದ. ಆದರೆ, ನ್ಯಾಯಾಲಯ ಈಗ ಆತನಿಗೆ ಬಿಗ್ ಶಾಕ್ ನೀಡಿದೆ.
ಮುಂದುವರೆದು, ದೆಹಲಿ ಪೊಲೀಸರು ದಾಖಲಿಸಿದ್ದ FIR ಆಧರಿಸಿ ಜಾರಿ ನಿರ್ದೇಶನಾಲಯವು ಹಣದ ಅಕ್ರಮ ವರ್ಗಾವಣೆ ಕಾಯ್ದೆಯಡಿ ತನಿಖೆ ಕೈಗೆತ್ತಿಕೊಂಡಿತ್ತು. ತನಿಖೆಯ ಪ್ರಕಾರ, ವಿಜಯ್ ಗುಪ್ತಾ ಜಮ್ಮು ಮೂಲದವನಾಗಿದ್ದು, ದೆಹಲಿಯಲ್ಲಿ ತಾನು PMO ಉನ್ನತಾಧಿಕಾರಿ ಎಂದು ಬಿಂಬಿಸಿಕೊಂಡಿದ್ದನು. ಸರ್ಕಾರಿ ಕೆಲಸಗಳು, ವರ್ಗಾವಣೆ ಮತ್ತು ಟೆಂಡರ್‌ಗಳನ್ನು ಕೊಡಿಸುವುದಾಗಿ ನಂಬಿಸಿ ಹಲವರಿನಿಂದ ಬರೋಬ್ಬರಿ 4.06 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾನೆ. ಈ ಅಕ್ರಮ ಹಣವನ್ನು ತನ್ನ ಬ್ಯಾಂಕ್ ಖಾತೆಗಳಿಗೆ ನಗದು ರೂಪದಲ್ಲಿ ಜಮಾ ಮಾಡಿಕೊಂಡಿದ್ದ ಗುಪ್ತಾ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಈ ಆದಾಯವನ್ನು ಮುಚ್ಚಿಟ್ಟಿದ್ದನು ಎನ್ನಲಾಗಿದೆ.
ಏತನ್ಮಧ್ಯೆ, ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾ. ಧೀರೇಂದ್ರ ರಾಣಾ ನೇತೃತ್ವದ ಪೀಠವು, ತನಿಖೆ ಇನ್ನು ಪ್ರಗತಿಯಲ್ಲಿದ್ದು, ಆರೋಪಿಯು ಸಾಕ್ಷ್ಯ ನಾಶಪಡಿಸುವ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇರುವುದರಿಂದ ಜಾಮೀನು ನಿರಾಕರಿಸಿದೆ.