ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ದೇಶದ ಮೊದಲ ಮಾಲಿನ್ಯರಹಿತ Hydrogen ಚಾಲಿತ ರೈಲಿಗೆ ಪ್ರಧಾನಿ ಮೋದಿ ಚಾಲನೆ! Video

ಈ ರೈಲನ್ನು ಪ್ರಾಯೋಗಿಕ (ಪೈಲಟ್) ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಭವಿಷ್ಯದಲ್ಲಿ ಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಹೈಡ್ರೋಜನ್ ತಂತ್ರಜ್ಞಾನದ ಬಳಕೆಗೆ ಇದು ದಾರಿ ಮಾಡಿಕೊಡಲಿದೆ.
Prime Minister Narendra Modi flags off India's first hydrogen-powered train, between Jind and Sonipat, at Jind Railway Station, Haryana.
ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್ ಮತ್ತು ಸೋನಿಪತ್ ನಡುವಿನ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.Photo | PTI
Updated on

ಹರಿಯಾಣ: ಭಾರತೀಯ ರೈಲ್ವೆ ವಲಯದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ದಿನ. ಪರಿಸರಸ್ನೇಹಿ ಮತ್ತು ಮಾಲಿನ್ಯರಹಿತ ಸಾರಿಗೆಗೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತದ ಮೊಟ್ಟಮೊದಲ ಜಲಜನಕ ಚಾಲಿತ (Hydrogen-Powered) ಪ್ಯಾಸೆಂಜರ್ ರೈಲಿಗೆ ಪ್ರಧಾನಮಂತ್ರಿನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದ್ದಾರೆ.

ಭಾರತೀಯ ರೈಲ್ವೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸಲಾಗುತ್ತಿದೆ. ಹೈಡ್ರೋಜನ್ ಇಂಧನ ಕೋಶಗಳ ಮೂಲಕ ವಿದ್ಯುತ್ ಉತ್ಪಾದಿಸಿ ರೈಲನ್ನು ಚಲಾಯಿಸಲಾಗುತ್ತಿದ್ದು, ಇದು ಡೀಸೆಲ್ ರೈಲುಗಳಿಗೆ ಪರಿಸರ ಸ್ನೇಹಿ ಪರ್ಯಾಯವಾಗಿದೆ. ಯೋಜನೆಯಡಿ ಹೈಡ್ರೋಜನ್ ಸಂಗ್ರಹಣೆ ಹಾಗೂ ಇಂಧನ ಮರುಪೂರೈಕೆ (ರಿಫ್ಯುಯೆಲಿಂಗ್) ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದೆ.

ರೈಲು ಉದ್ಘಾಟನೆಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, "ಹೈಡ್ರೋಜನ್ ಚಾಲಿತ ರೈಲು ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ಇದು ಭಾರತೀಯ ರೈಲ್ವೆಯಲ್ಲಿ ಶುದ್ಧ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ.

ಈ ರೈಲನ್ನು ಪ್ರಾಯೋಗಿಕ (ಪೈಲಟ್) ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಭವಿಷ್ಯದಲ್ಲಿ ಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಹೈಡ್ರೋಜನ್ ತಂತ್ರಜ್ಞಾನದ ಬಳಕೆಗೆ ಇದು ದಾರಿ ಮಾಡಿಕೊಡಲಿದೆ.

"ನಮೋ ಗ್ರೀನ್ ರೈಲ್" ಎಂದು ಹೆಸರಿಡಲಾದ ಈ ಅತ್ಯಾಧುನಿಕ ರೈಲು ಜಿಂದ್ ಮತ್ತು ಸೋನಿಪತ್ ನಡುವಿನ 89 ಕಿಲೋಮೀಟರ್ ಉದ್ದದ ಬ್ರಾಡ್-ಗೇಜ್ ಮಾರ್ಗದಲ್ಲಿ ತನ್ನ ಅಧಿಕೃತ ಸಂಚಾರವನ್ನು ಆರಂಭಿಸಿದೆ.

ಈ ಐತಿಹಾಸಿಕ ಹೆಜ್ಜೆಯೊಂದಿಗೆ ಜರ್ಮನಿ, ಚೀನಾ, ಜಪಾನ್ ಮತ್ತು ಅಮೆರಿಕದಂತಹ ಜಲಜನಕ ತಂತ್ರಜ್ಞಾನ ಹೊಂದಿರುವ ವಿಶ್ವದ ಪ್ರಮುಖ ದೇಶಗಳ ಸಾಲಿಗೆ ಭಾರತವೂ ಹೆಮ್ಮೆಯಿಂದ ಸೇರ್ಪಡೆಯಾಗಿದೆ.

ಜರ್ಮನಿ ವಿಶ್ವದ ಮೊದಲ ಹೈಡ್ರೋಜನ್ ಪ್ರಯಾಣಿಕರ ರೈಲು ಅಲ್ಸ್ಟೊಮ್ ಕೊರಾಡಿಯಾ ಐಲಿಂಟ್ (Alstom Coradia iLint) ಅನ್ನು ಆರಂಭಿಸಿದ ದೇಶವಾಗಿದೆ. 2022ರಲ್ಲಿ ಈ ರೈಲು 1,175 ಕಿ.ಮೀ ದೂರವನ್ನು ಮರು ಇಂಧನ ತುಂಬಿಸದೇ ಸಂಚರಿಸಿ ದಾಖಲೆ ನಿರ್ಮಿಸಿತ್ತು.

ಜಪಾನ್ 2027ರ ಹಣಕಾಸು ವರ್ಷದ ಅಂತ್ಯದೊಳಗೆ 'ಹೈಬಾರಿ' (Hybari) ಹೆಸರಿನ ಮೊದಲ ಹೈಡ್ರೋಜನ್ ಹೈಬ್ರಿಡ್ ರೈಲನ್ನು ಸೇವೆಗೆ ತರಲು ಯೋಜಿಸಿದೆ.

ಅಮೆರಿಕ 2024ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ 'ಜೆಮು' (Zemu) ಹೆಸರಿನ ಮೊದಲ ಹೈಡ್ರೋಜನ್ ಚಾಲಿತ ಪ್ರಯಾಣಿಕರ ರೈಲನ್ನು ಪರಿಚಯಿಸಿತ್ತು.

ಹೈಡ್ರೋಜನ್ ರೈಲಿನ ಪ್ರಮುಖ ವೈಶಿಷ್ಟ್ಯಗಳು...

  • 10 ಬೋಗಿಗಳ ಹೈಡ್ರೋಜನ್ ಫ್ಯುಯೆಲ್ ಸೆಲ್ ಆಧಾರಿತ ರೈಲು.

  • 1,200 ಕಿಲೋವ್ಯಾಟ್ ಸಾಮರ್ಥ್ಯದ ಹೈಡ್ರೋಜನ್ ಫ್ಯುಯೆಲ್ ಸೆಲ್ ಚಾಲನಾ ವ್ಯವಸ್ಥೆ.

  • ಗರಿಷ್ಠ 75 ಕಿ.ಮೀ/ಗಂಟೆ ಕಾರ್ಯಾಚರಣಾ ವೇಗ; ವಿನ್ಯಾಸ ವೇಗ 110 ಕಿ.ಮೀ/ಗಂಟೆ.

  • ಸುಮಾರು 2,600 ಪ್ರಯಾಣಿಕರ ಸಾಮರ್ಥ್ಯ.

  • ವಿನ್ಯಾಸ ಹಂತದಿಂದಲೇ ಸ್ವದೇಶಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ.

  • ಜಿಂದ್ ಜಂಕ್ಷನ್, ಗೋಹಾನಾ ಜಂಕ್ಷನ್ ಮತ್ತು ಸೋನಿಪತ್ ನಿಲ್ದಾಣಗಳನ್ನು ಸಂಪರ್ಕಿಸಲಿದೆ.

  • ಜಿಂದ್ ಸಿಟಿ, ಪಾಂಡು ಪಿಂಡಾರಾ ಜಂಕ್ಷನ್, ಲಲಿತ್ ಖೇರಾ ಹಾಲ್ಟ್, ಭಂಭೇವಾ, ಇಸಾಪುರ್ ಖೇರಿ ಹಾಲ್ಟ್, ಬುಟಾನಾ ಹಾಲ್ಟ್, ಖಂಡ್ರಾಯಿ ಹಾಲ್ಟ್, ರಬ್ರಾ ಹಾಲ್ಟ್, ಲಾಥ್ ಹಾಲ್ಟ್, ಮೊಹಾನಾ, ಬರ್ವಾಸ್ನಿ ಹಾಲ್ಟ್ ಹಾಗೂ ಸೋನಿಪತ್ ನ್ಯೂ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com