

ನವದೆಹಲಿ: ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ 'ಸಂಸತ್ ಚಲೋ' ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ದೇಶದ ಯುವಕರ ಮೇಲಿನ ಈ ದಮನವನ್ನು "ನಾಚಿಕೆಗೇಡಿನ ಅಧ್ಯಾಯ" ಎಂದು ಬಣ್ಣಿಸಿರುವ ಕಾಂಗ್ರೆಸ್, ಅಧಿಕಾರದಲ್ಲಿರುವವರ ಆದೇಶದ ಮೇರೆಗೆ ಯುವಕರ ಮೇಲೆ ಲಾಠಿ ಬೀಸುವವರು "ನಾಳೆ ಸಂವಿಧಾನದ ಲಾಠಿ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಹಂಚಿಕೊಂಡರು.
ದೇಶದ ಯುವ ಜನರ ಮೇಲೆ ನಡೆಯುತ್ತಿರುವ ಅನ್ಯಾಯಗಳ ಪಟ್ಟಿಗೆ ನಿನ್ನೆಯ ಘಟನೆ ಮತ್ತೊಂದು ನಾಚಿಕೆಗೇಡಿನ ಅಧ್ಯಾಯವಾಗಿದೆ. ಅಧಿಕಾರದಲ್ಲಿರುವವರ ಸೂಚನೆಯಂತೆ ಇಂದು ದೇಶದ ಯುವಕರನ್ನು ಥಳಿಸುತ್ತಿರುವವರು, ನಾಳೆ ಸಂವಿಧಾನದ ಲಾಠಿಯನ್ನು ಎದುರಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಈ ನಡುವೆ ಪ್ರತಿಭಟನೆ ಬಳಿಕ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು "ಭಾರತದ ಇತಿಹಾಸದಲ್ಲೇ ಅತ್ಯಂತ ಯುವ ವಿರೋಧಿ ಪ್ರಧಾನಿ" ಎಂದು ಟೀಕಿಸಿದ್ದಾರೆ.
"ಪ್ರಧಾನಿ ಮೋದಿ ಯುವಕರಿಗೆ ಎಷ್ಟು ವಿರೋಧಿಯಾಗಿದ್ದಾರೆಂದರೆ, ವಿಫಲ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಆರೋಪಿಸಿದ್ದಾರೆ.
ಅಲ್ಲದೆ, "152 ಪ್ರಶ್ನೆಪತ್ರಿಕೆ ಸೋರಿಕೆ, 7.5 ಕೋಟಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಒಬ್ಬ ತಪ್ಪಿತಸ್ಥನಿಗೂ ಶಿಕ್ಷೆಯಾಗಿಲ್ಲ. ಶಿಕ್ಷೆಯಾದದ್ದು ಶ್ರಮಪಟ್ಟು ಓದಿದ ಯುವಕರಿಗೆ ಮಾತ್ರ ಎಂದು ಹೇಳಿದ್ದಾರೆ.
ಅಲ್ಲದೆ, ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ಪ್ರತಿಭಟನಾಕಾರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ಹೇಳಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಮತ್ತು ಅಚಲ ಹಕ್ಕು" ಎಂದು ಅವರು ಹೇಳಿದ್ದಾರೆ. ವಿಡಿಯೊದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ನಡೆಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಈ ನಡುವೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ 'ಸಂಸತ್ ಚಲೋ' ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಸಂಸತ್‌ಗೆ ತೆರಳದಂತೆ ತಡೆಯಲು ದೆಹಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ. ಈ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರನ್ನು ಸಹ ಪೊಲೀಸರು ತಳ್ಳಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.
ಸಂಸತ್ತಿನಲ್ಲೂ ಪ್ರತಿಧ್ವನಿ
ಈ ನಡುವೆ ಮಳೆಗಾಲದ ಅಧಿವೇಶನದ ಮೊದಲ ದಿನವೇ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ ಪರಿಣಾಮ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹಾಗೂ ಡಿಎಂಕೆ ಸಂಸದೆ ಕನಿಮೊಳಿ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.