

ಚಿತ್ತೂರು: ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ್ದ ಭೀಕರ ವೋಲ್ವೋ ಕಾರು ದುರಂತವನ್ನೇ ನೆನಪಿಸುವಂತಹ ಮತ್ತೊಂದು ಅಪಘಾತ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಹೌದು.. ಹಠಾತ್ ಬ್ರೇಕ್ ಹಾಕಿದ ಕಾರಿನ ಮೇಲೆ ಬೃಹತ್ ಈಚರ್ ಸರಕು ಸಾಗಾಣಿಕಾ ಲಾರಿ ಉರುಳಿ ಬಿದ್ದಿದ್ದು, ಅಚ್ಚರಿ ಎಂದರೆ ಬೃಹತ್ ಲಾರಿ ಕಾರಿನ ಮೇಲೆ ಉರುಳಿದರೂ ಕಾರಿನಲ್ಲಿದ್ದವೆರೆಲ್ಲರೂ ಪವಾೃಡ ಸದೃಶ ಪಾರಾಗಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಗೂಟಿ ಮಂಡಲದ ಕುಕ್ಕಲಪಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊತ್ತ ಪೇಟ ಗ್ರಾಮದ ಬಳಿ ಗುರುವಾರ ಈ ದುರ್ಘಟನೆ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಟೊಮೆಟೋ ತುಂಬಿದ್ದ ಬೃಹತ್ ಈಚರ್ ಲಾರಿಯೊಂದು (KA 02 AJ 4524) Swift Dezire ಕಾರಿನ ಮೇಲೆ ಉರುಳಿಬಿದ್ದಿದೆ.
ಲಾರಿ ಉರುಳಿದ್ದರಿಂದ ಸ್ವಿಫ್ಟ್ ಕಾರು ಜಖಂ ಆಗಿದ್ದು, ಆದರೆ ಕಾರಿನಲ್ಲಿದ್ದ ಕುಟುಂಬದ ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲಗಳ ಪ್ರಕಾರ ಇವರೆಲ್ಲರೂ ದೇವಸ್ಥಾನ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬ್ರೇಕ್ ಹಾಕಿದಾಗ ಅಪಘಾತ
ಕಾರಿನಲ್ಲಿದ್ದವರು ಹೇಳಿದಂತೆ ಮುಂದೆ ಸಾಗುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಐಷರ್ ಲಾರಿ ಚಾಲಕ ವಾಹನವನ್ನು ನಿಯಂತ್ರಿಸಲು ಯತ್ನಿಸಿದಾಗ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆಯೇ ಉರುಳಿಬಿದ್ದಿದೆ ಎಂದು ಹೇಳಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ, ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳು ಹಾಗೂ ಆಘಾತ ಉಂಟಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ದೌಡು, ಕಾರಿನಲ್ಲಿದ್ದವರ ರಕ್ಷಣೆ
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಅತಿವೇಗ, ಸುರಕ್ಷಿತ ಅಂತರ ಕಾಯ್ದುಕೊಳ್ಳದಿರುವುದು ಅಥವಾ ಚಾಲಕರ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣವಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಈ ಘಟನೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ವಾಹನ ಚಲಾಯಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದ್ದು, ಸ್ಥಳೀಯರ ಸಮಯೋಚಿತ ನೆರವು ಮತ್ತು ತುರ್ತು ಸೇವೆಗಳ ತಕ್ಷಣದ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ.