

ನವದೆಹಲಿ: 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026'ರ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಒಪ್ಪಿಗೆಯನ್ನು ಸ್ಪೀಕರ್ ಓಂ ಬಿರ್ಲಾ ಪಡೆದುಕೊಂಡಿರುವುದರಿಂದ ಈ ಮಸೂದೆಯ ವಿಷಯದಲ್ಲಿ ಲೋಕಸಭೆಯಲ್ಲಿದ್ದ ಬಿಕ್ಕಟ್ಟು ಮಂಗಳವಾರ ಬಗೆಹರಿಯುವ ನಿರೀಕ್ಷೆಯಿದೆ ಎಂದು ಸಂಸದೀಯ ಮೂಲಗಳು ತಿಳಿಸಿವೆ.
ಮಂಗಳವಾರ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಯ ಕುರಿತು ಚರ್ಚಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಓಂ ಬಿರ್ಲಾ ಅವರ ನಿರಂತರ ಮಾತುಕತೆಯ ನಂತರ, ರಾಜಕೀಯ ಪಕ್ಷಗಳ ಸದನದ ನಾಯಕರು 'ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026'ರ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಸಮ್ಮತಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಜುಲೈ 20 ರಂದು ಸಂಸತ್ ಚಲೋ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಲಾಠಿಚಾರ್ಜ್ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ, ಸೋಮವಾರ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳದೆ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಆ ನಂತರ ಈ ಬೆಳವಣಿಗೆ ನಡೆದಿದೆ. ಸಂಜೆ 5 ಗಂಟೆಗೆ ಸದನ ಮತ್ತೆ ಸೇರಿದಾಗ, ಮಸೂದೆಯ ಕುರಿತು ಚರ್ಚೆಯನ್ನು ಪ್ರಾರಂಭಿಸುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿಕೊಂಡಿದ್ದರೂ, ವಿರೋಧ ಪಕ್ಷದ ಸಂಸದರು ಘೋಷಣೆ ಕೂಗುವುದನ್ನು ಮುಂದುವರಿಸಿದರು.
ಸ್ಪೀಕರ್ ಪೀಠದಲ್ಲಿದ್ದ ಕೃಷ್ಣ ಪ್ರಸಾದ್ ಟೆನ್ನೆಟಿ ಮಾತನಾಡಿ, ಚರ್ಚೆಯನ್ನು ಪ್ರಾರಂಭಿಸೋಣ. ಇದು ನಾವು ಕಾಯುತ್ತಿದ್ದ ಪ್ರಮುಖ ಮಸೂದೆ. ನಡ್ಡಾ ಅವರು ಚರ್ಚೆ ನಡೆಸಿದ್ದಾರೆ ಮತ್ತು ಪ್ರತಿಯೊಬ್ಬರಿಗೂ ಮಸೂದೆಯ ಕುರಿತು ಮಾತನಾಡಲು ಅವಕಾಶವಿರುತ್ತದೆ. ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಿ. ದಯವಿಟ್ಟು ನಿಮ್ಮ ಭಿತ್ತಿಪತ್ರ ಕೆಳಗಿಳಿಸಿ ಎಂದು ಹೇಳುವ ಮೂಲಕ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು.
ಕಾಂಗ್ರೆಸ್‌ನ ವರ್ಚಸ್ಸು ಇದರಿಂದ ಹಾಳಾಗಿದೆ: ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಕೂಡ ವಿರೋಧ ಪಕ್ಷದವರಿಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಮಸೂದೆಯು ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಅತ್ಯಂತ ಮಹತ್ವದ್ದಾಗಿದೆ. ಕಾಂಗ್ರೆಸ್ ಮತ್ತು ಅದರ ಕೆಲವು ಮಿತ್ರಪಕ್ಷಗಳು ಉದ್ದೇಶಪೂರ್ವಕವಾಗಿ ಮಸೂದೆಯ ಮೇಲಿನ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ಆರು ಗಂಟೆಗಳ ಸಮಯವನ್ನು ನಿಗದಿಪಡಿಸಿದ್ದಾರೆ ನೀವು ಬಯಸಿದರೆ, ಚರ್ಚೆಗೆ ಇನ್ನೂ ಹೆಚ್ಚಿನ ಸಮಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಹಾಗಿದ್ದರೂ ನೀವು ಹೀಗೆ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‌ನ ವರ್ಚಸ್ಸು ಇದರಿಂದ ಹಾಳಾಗಿದೆ ಎಂದು ನಾನು ಹೇಳಬಯಸುತ್ತೇನೆ; ಅವರು ಇಂತಹ ಕೆಲಸಗಳನ್ನು ಮಾಡಬಾರದು. ಯುವಜನರಿಗೆ ಮುಖ್ಯವಾದ ಈ ಮಸೂದೆಯ ಕುರಿತು ಎಲ್ಲಾ ಪಕ್ಷಗಳು ಚರ್ಚಿಸಬೇಕು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಸ್ಪೀಕರ್ ಓಂ ಬಿರ್ಲಾ, ಸರ್ಕಾರ ಮತ್ತು ವಿರೋಧ ಪಕ್ಷದವರಿಗೆ ಸಂಜೆ 5 ಗಂಟೆಯೊಳಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಮಸೂದೆಗೆ 91 ತಿದ್ದುಪಡಿಗಳನ್ನು ಮಂಡಿಸಲಾಗಿದೆ. ಚರ್ಚೆಗೆ ಆರು ಗಂಟೆಗಳ ಸಮಯವನ್ನು ಮೀಸಲಿಡಲಾಗಿದೆ ಹಾಗೂ ಸದನ ಬಯಸಿದರೆ ಹೆಚ್ಚುವರಿ ಸಮಯವನ್ನೂ ನೀಡಬಹುದು ಎಂದು ಪುನರುಚ್ಚರಿಸಿದರು.
ಪ್ರಧಾನ ಮಂತ್ರಿಯವರ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಡಿಸಿದ ಈ ಮಸೂದೆಯು 2024ರಲ್ಲಿ ಜಾರಿಗೆ ಬಂದಿದ್ದ 'ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಕಾನೂನನ್ನು' ಬಲಪಡಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಗರಿಷ್ಠ ಶಿಕ್ಷೆಯನ್ನು 10 ವರ್ಷಗಳ ಜೈಲುವಾಸಕ್ಕೆ ಹೆಚ್ಚಿಸುವುದು ಮತ್ತು ಪರೀಕ್ಷೆಗೆ ಸಂಬಂಧಿಸಿದ ಸಂಘಟಿತ ಅಪರಾಧಗಳಿಗೆ ದಂಡವನ್ನು ಹೆಚ್ಚಿಸುವುದನ್ನು ಇದು ಪ್ರಸ್ತಾಪಿಸುತ್ತದೆ. ಅಲ್ಲದೆ, ಈ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು (Fast Track Courts) ಸ್ಥಾಪಿಸುವ ಪ್ರಸ್ತಾಪವನ್ನೂ ಇದು ಒಳಗೊಂಡಿದೆ.