

ಮುಂಬೈ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಅನ್ನು ತಡೆದು ನಿಲ್ಲಿಸಿದ ನಂತರ ವೈರಲ್ ಆಗಿದ್ದ ಮಾಡೆಲ್ ರಿಯಾ ಯಾದವ್ ಅವರಿಗೆ ಆನ್ ಲೈನ್ ಮೂಲಕ ಕಿರುಕುಳ ನೀಡಲಾಗುತ್ತಿದ್ದು, ಈ ಸಂಬಂಧ ಮಹಾರಾಷ್ಟ್ರ ಪೊಲೀಸ್ ಸೈಬರ್ ಸೆಲ್ ಅನ್ನು ಸಂಪರ್ಕಿಸಿ, ದೂರು ದಾಖಲಿಸಿದ್ದಾರೆ.
40 ನಿಮಿಷ ಪೊಲೀಸ್ ವ್ಯಾನ್ ತಡೆದಿದ್ದ ಮಾಡೆಲ್ ರಿಯಾ ಅವರನ್ನು ಗಟ್ಟಿಗಿತ್ತಿ ಎಂದು ಅನೇಕ ಜನ ಶ್ಲಾಘಿಸಿದ್ದರು ಮತ್ತು ಆನ್‌ಲೈನ್‌ನಲ್ಲಿ ಬೆಂಬಲಿಸಿದ್ದರು. ಆದರೆ ಕೆಲವು ದುಷ್ಕರ್ಮಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಿಯಾ ಹೇಳಿಕೊಂಡಿದ್ದಾರೆ.
ANI ಜೊತೆ ಮಾತನಾಡಿದ ರಿಯಾ, ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದೆ. ನಂತರ ಸೈಬರ್ ಸೆಲ್‌ನಿಂದ ಕರೆ ಬಂದಿತು, ಹೀಗಾಗಿ ಸೋಮವಾರ ಮಹಾರಾಷ್ಟ್ರ ಪೊಲೀಸ್ ಸೈಬರ್ ಸೆಲ್‌ಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ, ಆದರೆ ಯಾರನ್ನಾದರೂ ಕೀಳಾಗಿ ಕಾಣುವ, ಅವರ ಖ್ಯಾತಿಯನ್ನು ಕೆಣಕುವ, ಸಾರ್ವಜನಿಕವಾಗಿ ಅವರ ಘನತೆಯ ಮೇಲೆ ದಾಳಿ ಮಾಡುವ ಅಥವಾ ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿಲ್ಲ ಎಂದು ಹೇಳಿಕೆಗಳನ್ನು ನೀಡುವ ಹಕ್ಕು ಯಾರಿಗೂ ಇಲ್ಲ. ನಾವು ಪ್ರಾರಂಭಿಸಿದ ಚಳುವಳಿ ಯಾವುದೇ ರಾಜಕೀಯ ಪಕ್ಷ, ಧರ್ಮ ಅಥವಾ ವ್ಯಕ್ತಿಗಾಗಿ ಅಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅದು ನಮ್ಮೆಲ್ಲರಿಗಾಗಿ" ಎಂದು ಅವರು ತಿಳಿಸಿದ್ದಾರೆ.