

ನವದೆಹಲಿ: 2014ರಿಂದ ಬಂಧನದಲ್ಲಿದ್ದ ಇಂಡಿಯನ್ ಮುಜಾಹಿದ್ದೀನ್‌ನ ಇಬ್ಬರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಹೆಚ್ಚು ದಿನ ಆರೋಪಿಗಳನ್ನು ಬಂಧನದಲ್ಲಿರಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸ್ವಾತಂತ್ರ್ಯದ ಹಕ್ಕಿನ ಘೋರ ಉಲ್ಲಂಘನೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ದೆಹಲಿಯಲ್ಲಿ ದಾಖಲಾಗಿರುವ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಮೊಹಮ್ಮದ್ ಸಾಕಿಬ್ ಅನ್ಸಾರಿ ಮತ್ತು ವಕಾರ್ ಅಜರ್ ಸುಮಾರು 12 ವರ್ಷಗಳಿಂದ ಜೈಲಿನಲ್ಲಿದ್ದು ವಿಚಾರಣೆ ಶೀಘ್ರದಲ್ಲೇ ಮುಗಿಯುವ ಭರವಸೆ ಇಲ್ಲ ಎಂದು ಕೋರ್ಟ್ ಗಮನಿಸಿದೆ. ಜುಲೈ 27ರ ತನ್ನ ಆದೇಶದಲ್ಲಿ ವಿಚಾರಣಾ ಪ್ರಕ್ರಿಯೆಗಳು ತುಂಬಾ ನಿಧಾನವಾಗಿದ್ದು, ಮುಂದಿನ ದಿನಗಳಲ್ಲಿ ಅದು ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ ಎಂದು ಪೀಠ ಹೇಳಿದೆ. ಸಹ-ಆರೋಪಿಗಳಲ್ಲಿ ಒಬ್ಬರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದು ಅದು ಗಮನಿಸಿದೆ.
ಅನ್ಸಾರಿ ಮತ್ತು ಅಜರ್ ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ. 2011ರ ನವೆಂಬರ್‌ನಲ್ಲಿ ದೆಹಲಿ ಪೊಲೀಸರ ವಿಶೇಷ ಕೋಶ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶವನ್ನು ಈ ಅರ್ಜಿಗಳು ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಅರ್ಜಿದಾರರನ್ನು ನಿರಂತರವಾಗಿ ಜೈಲಿನಲ್ಲಿಡುವುದು ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಸ್ವಾತಂತ್ರ್ಯದ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಪೀಠ ಹೇಳಿದೆ.
ಮೂರು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರನ್ನು 2014ರಲ್ಲಿ ಬಂಧಿಸಲಾಯಿತು. ಅವುಗಳಲ್ಲಿ ಎರಡು ರಾಜಸ್ಥಾನದಲ್ಲಿ ದಾಖಲಾಗಿದ್ದು ಅಂದಿನಿಂದ ಆರೋಪಿಗಳು ಬಂಧನದಲ್ಲಿದ್ದಾರೆ. ರಾಜಸ್ಥಾನದಲ್ಲಿ ದಾಖಲಾಗಿರುವ ಒಂದು ಪ್ರಕರಣದಲ್ಲಿ, ಇಬ್ಬರೂ ಅರ್ಜಿದಾರರನ್ನು ಮಾರ್ಚ್ 2021 ರಲ್ಲಿ ಕೆಳ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿತು. ನಂತರ ಹೈಕೋರ್ಟ್ ಅವರ ಶಿಕ್ಷೆಯನ್ನು ತಡೆಹಿಡಿದಿದೆ ಎಂದು ಪೀಠ ಗಮನಿಸಿದೆ.
ಇಂಡಿಯನ್ ಮುಜಾಹಿದ್ದೀನ್ ಸದಸ್ಯ ಎಂದು ಹೇಳಲಾದ ಮೊಹಮ್ಮದ್ ಖತೀಲ್ ಸಿದ್ದಿಕಿ ಎಂಬಾತನನ್ನು ನವೆಂಬರ್ 2011ರಲ್ಲಿ ಬಂಧಿಸಲಾಯಿತು. ದೆಹಲಿ ಮತ್ತು ಸುತ್ತಮುತ್ತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಘಟನೆಯ ರಾಜಸ್ಥಾನ ಮಾಡ್ಯೂಲ್ ರಚನೆಯ ಬಗ್ಗೆ ಮಾಹಿತಿ ಒದಗಿಸಿದ್ದಾರೆ ಎಂದು ಆರೋಪಿಸಲಾಯಿತು. ತರುವಾಯ, ವಿಶೇಷ ಸೆಲ್ ಹಲವಾರು ಜನರನ್ನು ಬಂಧಿಸಿ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತು.