

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೊನ್ನೆ ಮಂಗಳವಾರ ನಡೆದ ಪಾಸಿಂಗ್ ಔಟ್ ಪೆರೇಡ್ ಬಳಿಕ ಹೊಸದಾಗಿ ನಿಯೋಜನೆಗೊಂಡ ಸೇನಾ ಪೈಲಟ್ ತನ್ನ ಪ್ರೇಯಸಿಗೆ ವಿವಾಹ ಪ್ರಸ್ತಾಪ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ಮತ್ತು ಆ ದಿನದ ಛಾಯಾಚಿತ್ರಗಳು ಸೇನಾ ನಿಯಮಾವಳಿಗಳ ಉಲ್ಲಂಘನೆಯ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿವೆ.
ವರದಿಗಳ ಪ್ರಕಾರ, ಭಾರತೀಯ ಸೇನೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಅಧಿಕಾರಿಯಿಂದ ವಿವರಣೆ ಕೇಳುವ ಸಾಧ್ಯತೆ ಇದೆ.
ಮಾಹಿತಿಯಂತೆ, ಸೇನೆಯಿಂದ ನಿಗದಿಪಡಿಸಲಾದ ಕೆಲವು ಶಿಸ್ತು ಮತ್ತು ಶಿಷ್ಠಾಚಾರಗಳನ್ನು ಈ ಘಟನೆ ಉಲ್ಲಂಘಿಸಿರಬಹುದು ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್ ಭರತ್ ಭಾರಧ್ವಾಜ್ ಅವರು ಸೇನಾ ಸಮವಸ್ತ್ರ ಧರಿಸಿ, ಪಾಸಿಂಗ್ ಔಟ್ ಪೆರೇಡ್ ಮಾದರಿಯ ಅಧಿಕೃತ ಕಾರ್ಯಕ್ರಮದ ಸಂದರ್ಭದಲ್ಲಿ, ಸೇನಾ ಉಪಕರಣಗಳ ಎದುರು ತಮ್ಮ ಗೆಳತಿಗೆ ಪ್ರಪೋಸ್ ಮಾಡುವ ಮೂಲಕ ಸೇನಾ ಸಂಪ್ರದಾಯ ಮತ್ತು ಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸೇನಾ ಮೂಲಗಳ ಪ್ರಕಾರ, ಸಮಯ, ಸ್ಥಳ ಮತ್ತು ಸಂಪ್ರದಾಯದ ದೃಷ್ಟಿಯಿಂದ ಈ ಕೃತ್ಯ ಸೂಕ್ತವಲ್ಲ ಎಂದು ಸೇನೆ ಅಸಮಾಧಾನ ವ್ಯಕ್ತಪಡಿಸಿದೆ.
ನಾಸಿಕ್‌ನ ಕಾಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್ (CAATS) ನಲ್ಲಿ ಹಾರಾಟ ತರಬೇತಿ ಪೂರ್ಣಗೊಳಿಸಿದ ಬಳಿಕ ಭಾರತೀಯ ಸೇನಾ ಏವಿಯೇಷನ್ ವಿಭಾಗದ ಕ್ಯಾಪ್ಟನ್ ಭರತ್ ಭಾರಧ್ವಾಜ್ ತಮ್ಮ ಗೆಳತಿ ಆರೂಷಿ ಅವರಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ವಿವಾಹ ಪ್ರಸ್ತಾಪ ಮಾಡಿದರು.
ವಿಧಿವಿಧಾನಗಳಿಗೆ ಅನುಗುಣವಾದ ಸೇನಾ ಸಮವಸ್ತ್ರ ಧರಿಸಿದ್ದ ಅವರು ವಿಮಾನ ನಿಲ್ದಾಣದ ಟಾರ್ಮ್ಯಾಕ್ ಪ್ರದೇಶಕ್ಕೆ ನಡೆದು ಬಂದು, ಆರೂಷಿಯ ಮುಂದೆ ಮಂಡಿಯೂರಿ ಕುಳಿತು ಉಂಗುರ ಹಾಕಿ ವಿವಾಹ ಪ್ರಸ್ತಾಪ ಮಾಡಿದರು. ಈ ದೃಶ್ಯವನ್ನು ಅಲ್ಲಿದ್ದವರು ಚಿತ್ರೀಕರಿಸಿದ್ದು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಯಿತು.
ನಾಸಿಕ್‌ನಲ್ಲಿರುವ ಕಾಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್ (CAATS) ಭಾರತೀಯ ಸೇನೆಯ ಪ್ರಮುಖ ಹಾರಾಟ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಸೇನಾ ಅಧಿಕಾರಿಗಳಿಗೆ ವಿಮಾನಯಾನ ಕಾರ್ಯಾಚರಣೆಗಳು ಹಾಗೂ ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಅಗತ್ಯವಾದ ಉನ್ನತ ಮಟ್ಟದ ತರಬೇತಿಯನ್ನು ನೀಡುತ್ತದೆ.
ಸೇನಾ ಏವಿಯೇಷನ್ ಪೈಲಟ್‌ಗಳಾಗಲು ಅಧಿಕಾರಿಗಳು ಕಠಿಣ ತರಬೇತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಆದ್ದರಿಂದ ಈ ತರಬೇತಿಯಿಂದ ಪದವಿ ಪಡೆಯುವುದು ಸೇನಾ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ಪ್ರಶಂಸೆಗೆ ಪಾತ್ರವಾಗಿದ್ದರೆ, ಮತ್ತೊಂದೆಡೆ ಸೇನಾ ಶಿಸ್ತು ಮತ್ತು ಸಂಪ್ರದಾಯಗಳ ದೃಷ್ಟಿಯಿಂದ ಇದು ಸೂಕ್ತವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
Advertisement