'ತಮಿಳು ನಾಡು ಸಿಂಗಂ' ಅಣ್ಣಾಮಲೈ BJP ಗೆ ರಾಜೀನಾಮೆ ನೀಡಿದ್ದೇಕೆ: ಪತ್ರದಲ್ಲಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತನಾಗಿ, ತಮಿಳುನಾಡಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಾಗೂ ರಾಜ್ಯದ ರಾಜಕೀಯದ ಕಾರ್ಯವೈಖರಿಯನ್ನು ಸುಧಾರಿಸಲು ಆರು ವರ್ಷಗಳ ಹಿಂದೆ ನಾನು ಬಿಜೆಪಿಗೆ ಸೇರಿದ್ದೆ ಎಂದು ಅಣ್ಣಾಮಲೈ ಪತ್ರದಲ್ಲಿ ಬರೆದಿದ್ದಾರೆ.
K Annamalai
ಕೆ ಅಣ್ಣಾಮಲೈ
Updated on

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಶುಕ್ರವಾರ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, “ಸಾಮಾನ್ಯ ಜನರಿಗಾಗಿ” ಹೊಸ ರಾಜಕೀಯ ಚಳವಳಿಯನ್ನು ಆರಂಭಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಅವರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, ಆರು ವರ್ಷಗಳ ಹಿಂದೆ ತಾವು ಯುವಕನಾಗಿದ್ದು ಅನುಭವವಿಲ್ಲದವರಾಗಿದ್ದಾಗಲೇ ಬಿಜೆಪಿ ಪಕ್ಷವು ತಮ್ಮ ಮೇಲೆ ವಿಶ್ವಾಸವಿಟ್ಟು ಪ್ರಮುಖ ಜವಾಬ್ದಾರಿಗಳನ್ನು ನೀಡಿತ್ತು ಎಂದು ಹೇಳಿದ್ದಾರೆ. ತಮಿಳುನಾಡಿನ ರಾಜಕೀಯ ಸಂಸ್ಕೃತಿಯನ್ನು ಸುಧಾರಿಸುವುದೇ ತಮ್ಮ ಉದ್ದೇಶವಾಗಿತ್ತು ಎಂದೂ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತನಾಗಿ, ತಮಿಳುನಾಡಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಾಗೂ ರಾಜ್ಯದ ರಾಜಕೀಯದ ಕಾರ್ಯವೈಖರಿಯನ್ನು ಸುಧಾರಿಸಲು ಆರು ವರ್ಷಗಳ ಹಿಂದೆ ನಾನು ಬಿಜೆಪಿಗೆ ಸೇರಿದ್ದೆ ಎಂದು ಅಣ್ಣಾಮಲೈ ಪತ್ರದಲ್ಲಿ ಬರೆದಿದ್ದಾರೆ.

K Annamalai
‘ಇಂದಿನಿಂದ ಹೊಸ ರಾಜಕೀಯ ಚಳವಳಿ’: ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸಿ 2031ರ ಚುನಾವಣೆಗೆ ಅಣ್ಣಾಮಲೈ ಸಜ್ಜು-Video

ಅತ್ಯಂತ ಮುಖ್ಯವಾಗಿ, ರಾಜಕೀಯ ಎನ್ನುವುದು ಕೇವಲ ಶ್ರೀಮಂತರಿಗೆ ಅಥವಾ ಆಯ್ದ ಕೆಲವರಿಗೆ ಮಾತ್ರ ಸೀಮಿತವಾದ ಮಾರ್ಗವಲ್ಲ, ಸಾಮಾನ್ಯ ಜನರಿಗೂ ಅವಕಾಶವಿದೆ ಎಂಬ ಧೋರಣೆ ಬದಲಾಯಿಸಲು ಬಯಸಿದ್ದೆ. ಅತ್ಯಂತ ಯುವಕನಾಗಿದ್ದ ಮತ್ತು ಅನುಭವ ಕಡಿಮೆ ಹೊಂದಿದ್ದ ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿಗಳನ್ನು ನೀಡಿದ ಬಿಜೆಪಿ ನಾಯಕತ್ವಕ್ಕೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮ್ಮ ಬೆಂಬಲಿಗರಿಂದ ‘ಸಿಂಗಂ’ ಎಂದು ಕರೆಯಲ್ಪಡುವ ಅಣ್ಣಾಮಲೈ, ತಮಿಳುನಾಡಿನ ಜನರು ಹಲವು ದಶಕಗಳಿಂದಲೂ ಇದ್ದ ರಾಜಕೀಯ ಚರ್ಚೆಗಳಿಂದ ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಬದಲಾವಣೆ ತರಲು ಕೆಲವು ಪ್ರಯತ್ನಗಳು ನಡೆದಿದ್ದವು. ಆದರೆ ಅವು ದೀರ್ಘಕಾಲ ಉಳಿಯಲಿಲ್ಲ, ಜನರ ನೆನಪಿನಿಂದ ಬೇಗ ಮಾಯವಾದವು. ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಜನರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಮಾತನಾಡಲಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ರಾಜೀನಾಮೆ ನೀಡಿದ್ದೇಕೆ?

ತಮ್ಮ ವಿಚಾರಗಳು ಮತ್ತು ಕಾಳಜಿಗಳಿಗೆ ಬೆಂಬಲ ನೀಡಿದ ಬಿಜೆಪಿ ಉನ್ನತ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿದ ಅವರು, ಕಳೆದ 18 ತಿಂಗಳಲ್ಲಿ ಪಕ್ಷದ ಉನ್ನತ ನಾಯಕರೊಂದಿಗೆ ಹಲವು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ ಎಂದರು.

ಬಲಿಷ್ಠ ಮತ್ತು ಏಕೀಕೃತ ಭಾರತವು ಅದರ ವಿವಿಧ ಪ್ರದೇಶಗಳು ಮತ್ತು ಸಮುದಾಯಗಳ ಶಕ್ತಿ, ಗೌರವ ಹಾಗೂ ಆಶಯಗಳ ಮೇಲೆ ನಿರ್ಮಾಣವಾಗುತ್ತದೆ ಎಂಬುದು ನನ್ನ ದೃಢ ನಂಬಿಕೆ. ನಾನು ಸಮಯೋಚಿತವಾಗಿ ಪ್ರಸ್ತಾಪಿಸಿದ ವಿಚಾರಗಳಿಗೆ ಬೆಂಬಲ ನೀಡಿದ ಬಿಜೆಪಿ ಹಿರಿಯ ನಾಯಕತ್ವಕ್ಕೆ ಧನ್ಯವಾದಗಳು. ಕಳೆದ 18 ತಿಂಗಳಲ್ಲಿ ನಡೆದ ಅನೇಕ ಚರ್ಚೆಗಳು ಮತ್ತು ನಾನು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ತಮಿಳುನಾಡಿನ ಕುರಿತು ತಮ್ಮ ದೃಷ್ಟಿಕೋನವು ಪಕ್ಷದ ನಿಲುವಿನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬ ನಿರ್ಣಯಕ್ಕೆ ಬಂದು ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಅಭಿವೃದ್ಧಿ ಕೇಂದ್ರಿತ ಹಾಗೂ ಸಾಂಸ್ಕೃತಿಕ ನೆಲೆಯ ರಾಜಕೀಯದ ಭವಿಷ್ಯದ ಬಗ್ಗೆ ನನ್ನ ಆಲೋಚನೆಗಳಿಂದ ಪಕ್ಷದ ಉನ್ನತ ನಾಯಕತ್ವಕ್ಕೆ ಇನ್ನಷ್ಟು ಭಾರವಾಗಲು ನಾನು ಬಯಸುವುದಿಲ್ಲ. ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಗಳ ನಂತರ, ತಮಿಳುನಾಡಿನ ವಿಷಯದಲ್ಲಿ ನಮ್ಮ ದೃಷ್ಟಿಕೋನಗಳು ಒಂದೇ ರೀತಿಯಲ್ಲಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಹಳ ಚಿಂತನೆಯ ನಂತರ, ಪಕ್ಷದಿಂದ ಹೊರಬಂದು, ನಾನು ರಾಜಕೀಯಕ್ಕೆ ಪ್ರವೇಶಿಸಿದ ನಿಜವಾದ ಉದ್ದೇಶದ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ ಎಂದು ನಂಬಿದ್ದೇನೆ. ಭವಿಷ್ಯದಲ್ಲಿ ಗಾಳಿಯ ದಿಕ್ಕು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಸಾಗಲು ಸಿದ್ಧನಿದ್ದೇನೆ. ನನ್ನ ಸಂಘಟನಾ ಜವಾಬ್ದಾರಿಗಳಿಂದ ತಕ್ಷಣದಿಂದಲೇ ಬಿಡುಗಡೆ ನೀಡಿ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿರುವ ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿನಮ್ರವಾಗಿ ಕೋರುತ್ತೇನೆ ಎಂದು ಅಣ್ಣಾಮಲೈ ಬಿಜೆಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com