

ನವದೆಹಲಿ: ಸಿಬಿಎಸ್‌ಇ ಮತ್ತು ಸಿಒಇಎಂಪಿಟಿ ನಡುವಿನ 'ಒಡಂಬಡಿಕೆ'ಯನ್ನು ಬಹಿರಂಗಪಡಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ವಿದ್ಯಾರ್ಥಿಗಳಾದ ಸಾರ್ಥಕ್ ಸಿದ್ಧಾಂತ್ ಮತ್ತು ಅವರ ಸಹವರ್ತಿ ನಿಸರ್ಗ ಅಧಿಕಾರಿ ಅವರನ್ನು ಶ್ಲಾಘಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಯುವಕರು ರೀಲ್‌ಗಳನ್ನು ಮಾಡುವುದನ್ನು ಮತ್ತು 'ಪಕೋಡ' ಕರಿಯುವುದನ್ನು ಮುಂದುವರಿಸಬೇಕೆಂದು ಬಯಸುತ್ತಾರೆ. ಆದರೆ, ಈ ವಿದ್ಯಾರ್ಥಿಗಳು ವಾಸ್ತವವಾಗಿ ತನಿಖೆ ನಡೆಸಿ, ಪ್ರಮುಖ ವಿಷಯಗಳಿಗೆ ಉತ್ತರಗಳನ್ನು ಕಂಡುಕೊಂಡರು ಎಂದಿದ್ದಾರೆ.
ರಾಹುಲ್ ಗಾಂಧಿ ಅವರು 18 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ಅವರ ಭೇಟಿಯ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
CBSEಯ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಬಳಸುವ ಆನ್‌ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್ (OSM) ಕೆಲಸವನ್ನು ನಿರ್ವಹಿಸಲು ಮಾರಾಟಗಾರರನ್ನು (ಕಂಪನಿ/ಸೇವಾ ಪೂರೈಕೆದಾರ) ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಾರ್ಥಕ್ ಆರೋಪಿಸಿದ್ದಾರೆ.
ವಿಡಿಯೋ ಜೊತೆಗೆ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು, 'ಸಾರ್ಥಕ್‌ಗೆ 18 ವರ್ಷ, ಆದರೆ ಮನಸ್ಥಿತಿ, ಧೈರ್ಯ ಮತ್ತು ತತ್ವಗಳ ವಿಷಯದಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ತನಿಖಾ ಪತ್ರಕರ್ತರು ಮಾಡಲಾಗದ ಸಾಧನೆಯನ್ನು ಅವರು ಮತ್ತು ಅವರ ಸಹವರ್ತಿ ನಿಸರ್ಗ್ ಮಾಡಿದ್ದಾರೆ: ಅವರು CBSE ಮತ್ತು COEMPT ನಡುವಿನ ಒಪ್ಪಂದವನ್ನು ರಾಷ್ಟ್ರದ ಮುಂದೆ ಬಹಿರಂಗಪಡಿಸಿದ್ದಾರೆ.
'ದೇಶದ 18 ವರ್ಷದ ಯುವಕನೊಬ್ಬ ಸಿಬಿಐಗಿಂತ ವೇಗವಾಗಿ ಮತ್ತು ಚುರುಕಾಗಿ ಕೆಲಸ ಮಾಡಿದ್ದಾನೆಂದು ಸಾಬೀತಾಯಿತು; ಯುವಕರ ಈ ಗೆಲುವು ನಿಜವಾದ ಅರ್ಥದಲ್ಲಿ ಸರ್ಕಾರದ ಸೋಲು. ಮೋದಿ ಜಿ ನಮ್ಮ ದೇಶದ ಯುವಕರು ಪ್ರಶ್ನೆಗಳನ್ನು ಕೇಳದೆ ಅಥವಾ ಕಣ್ಣು ತೆರೆಯದೆ ರೀಲ್‌ಗಳನ್ನು ಮಾಡುತ್ತಾ, ಪಕೋಡಗಳನ್ನು ಕರಿಯುವುದನ್ನು ಮುಂದುವರಿಸಬೇಕೆಂದು ಬಯಸುತ್ತಾರೆ. ಆದರೆ, ಈ ಯುವಕರು ಪ್ರಶ್ನೆಗಳನ್ನು ಕೇಳಿದರು ಮತ್ತು ಉತ್ತರಗಳನ್ನು ಸಹ ತಾವೇ ಕಂಡುಕೊಂಡರು' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
'ಇದು ಭಾರತದ ನಿಜವಾದ ಯುವ ಶಕ್ತಿ. ನೆನಪಿಡಿ, ದೇಶದ ಭವಿಷ್ಯವು ದಾರಿ ತಪ್ಪುವುದಿಲ್ಲ' ಎಂದು ಅವರು ಹೇಳಿದರು.
ಆನ್-ಸ್ಕ್ರೀನ್ ಅಂಕ ವ್ಯವಸ್ಥೆ ವಿವಾದದ ನಂತರ ಸರ್ಕಾರ ಇಬ್ಬರು ಉನ್ನತ ಸಿಬಿಎಸ್‌ಇ ಅಧಿಕಾರಿಗಳನ್ನು ಹೊರಹಾಕಿದೆ. ಆದರೆ, ವಿರೋಧ ಪಕ್ಷ ಕಾಂಗ್ರೆಸ್ ಇದನ್ನು ಕಣ್ಣೊರೆಸುವ ತಂತ್ರ ಎಂದು ದೂರಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಬೇಕು ಮತ್ತು ಸ್ವತಂತ್ರ ನ್ಯಾಯಾಂಗ ತನಿಖೆಗೆ ತಕ್ಷಣ ಆದೇಶಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿಯ ಪತ್ರಿಕೆಗಳನ್ನು ಪರಿಶೀಲಿಸುವ ಸಾಂಪ್ರದಾಯಿಕ ವಿಧಾನವನ್ನು ಡಿಜಿಟಲ್ ಮೌಲ್ಯಮಾಪನದೊಂದಿಗೆ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಗೆ ಬದಲಿಸಿತು.
ಆದಾಗ್ಯೂ, ಕೆಲವು 12ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿಯು ಅಪ್‌ಲೋಡ್ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ತಮ್ಮ ಕೈಬರಹಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಆರೋಪಿಸಿದ ನಂತರ ವಿವಾದ ಭುಗಿಲೆದ್ದಿತು.
Advertisement