

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಸಂಖ್ಯೆಯನ್ನು ಕೇಂದ್ರ ಸರ್ಕಾರವು ನಾಲ್ಕಕ್ಕೆ ಇಳಿಕೆ ಮಾಡಿದೆ.
ಪಿಎಂಯುವೈ ಯೋಜನೆಯನ್ನು 2016ರಲ್ಲಿ ಆರಂಭಿಸಲಾಗಿದೆ. ಇದರ ಅಡಿಯಲ್ಲಿ ಬಡ ಕುಟುಂಬಗಳಿಗೆ ಸೇರಿದ ಮಹಿಳೆಯರಿಗೆ ಠೇವಣಿ ಇಲ್ಲದೆ ಎಲ್‌ಪಿಜಿ ಸಂಪರ್ಕ ಒದಗಿಸಲಾಗುತ್ತದೆ. ಆರಂಭದಲ್ಲಿ ಈ ಯೋಜನೆಯ ಅಡಿ ಫಲಾನುಭವಿಗಳಿಗೆ ವರ್ಷವೊಂದರಲ್ಲಿ 14.2 ಕೆ.ಜಿ. ತೂಕದ 12 ಸಿಲಿಂಡರ್‌ಗಳನ್ನು ಸಬ್ಸಿಡಿ ಸಹಿತವಾಗಿ ಒದಗಿಸಲಾಗುತ್ತಿತ್ತು. ಕಳೆದ ವರ್ಷ ಇದನ್ನು ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳಿಗೆ ಇಳಿಸಲಾಯಿತು.
ಈಗ ಅದನ್ನು ನಾಲ್ಕಕ್ಕೆ ಇಳಿಕೆ ಮಾಡಲಾಗಿದೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನೂಜಾ, ಪರಿಷ್ಕೃತ ಅರ್ಹತೆಯು ಉಜ್ವಲ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ಧಾರೆ.
ಈಗ ಅರ್ಹ ಸಂಖ್ಯೆಯ ಸಿಲಿಂಡರ್‌ಗಳಿಗೆ 300 ರು. ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ಮೊತ್ತವು ಫಲಾನುಭವಿಗಳಿಗೆ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ಬೆನ್ನಲ್ಲೇ ಸಬ್ಸಿಡಿ ಸಹಿತ ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.
ಶುದ್ಧ ಅಡುಗೆ ಇಂಧನದ ಬಳಕೆಯನ್ನು ಉತ್ತೇಜಿಸಲು ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು, ಸರ್ಕಾರವು ಮೇ 2022 ರಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ನೀಡಿತ್ತು. ಇದನ್ನು ವಾರ್ಷಿಕವಾಗಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿತ್ತು.
ಪ್ರತಿ ಸಿಲಿಂಡರ್ ಖರೀದಿಸಿದ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಅಕ್ಟೋಬರ್ 2023 ರಲ್ಲಿ ಈ ಸಬ್ಸಿಡಿಯನ್ನು 300 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಈ ಪ್ರಯೋಜನವನ್ನು 5 ಕೆಜಿ ಸಿಲಿಂಡರ್‌ಗಳಗೂ ವಿಸ್ತರಿಸಲಾಗಿತ್ತು.
ಸರ್ಕಾರವು 2022 ರಿಂದ 52,000 ಕೋಟಿ ರೂ. ಸಬ್ಸಿಡಿ ನೀಡಿದೆ. ಬೆಲೆ ಏರಿಕೆಯ ಹೊರತಾಗಿಯೂ, ತೈಲ ಕಂಪನಿಗಳು 14.2 ಕೆಜಿ ಸಿಲಿಂಡರ್‌ಗೆ ಸುಮಾರು 700 ರೂ. ನಷ್ಟವನ್ನು ಮುಂದುವರೆಸಿವೆ ಎಂದು ಖನೂಜಾ ತಿಳಿಸಿದ್ದಾರೆ. ಎಲ್‌ಪಿಜಿ ಜೊತೆಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದಲೂ ನಷ್ಟ ಅನುಭವಿಸುತ್ತಿವೆ ಎಂದು ಅವರು ಬೆಲೆ ಏರಿಕೆಗೆ ಕಾರಣಗಳನ್ನು ನೀಡಿದ್ದಾರೆ.
Advertisement