

ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ, ಪಕ್ಷದ ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರಾಯಿಕ್ ಅವರು ಗುರುವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬರಾಯಿಕ್ ಅವರು ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ, ನಾನು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಅದನ್ನು ತಕ್ಷಣದಿಂದಲೇ ಅಂಗೀಕರಿಸುವಂತೆ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ. ಜೊತೆಗೆ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಸಭಾಪತಿ, ಉಪಸಭಾಪತಿ ಹಾಗೂ ರಾಜ್ಯಸಭಾ ಕಾರ್ಯದರ್ಶಿ ಕಚೇರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳದ ಆದಿವಾಸಿ ಸಮುದಾಯದ ನಾಯಕನಾಗಿರುವ ಬರಾಯಿಕ್ ಅವರು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹಾಗೂ ಜನಜಾತಿ ವ್ಯವಹಾರಗಳ ಸಲಹಾ ಸಮಿತಿಯ ಸದಸ್ಯರಾಗಿದ್ದರು.
ಈ ವಾರದ ಆರಂಭದಲ್ಲಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳಿರುವುದಾಗಿ ಹೇಳಿ ಟಿಎಂಸಿಯನ್ನು ತೊರೆದಿದ್ದರು.
ಅದರ ಬೆನ್ನಲ್ಲೇ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಅವರು ನಿನ್ನೆ ಸಂಸತ್ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ಹಿಮಂತ ಬಿಸ್ವ ಶರ್ಮಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
ಬರಾಯಿಕ್ ಅವರ ರಾಜೀನಾಮೆಯೊಂದಿಗೆ ಈ ವಾರದಲ್ಲೇ ಟಿಎಂಸಿ ಮೂರು ರಾಜ್ಯಸಭಾ ಸದಸ್ಯರನ್ನು ಕಳೆದುಕೊಂಡಂತಾಗಿದೆ. ಇದರಿಂದ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಟಿಎಂಸಿ ಸಂಘಟನೆ ಹಾಗೂ ಶಾಸಕರ ಬಲ ಎರಡರಲ್ಲೂ ದುರ್ಬಲಗೊಂಡಿದ್ದು, ಪಕ್ಷವು ಗಂಭೀರ ರಾಜಕೀಯ ಸಂಕಷ್ಟವನ್ನು ಎದುರಿಸುತ್ತಿದೆ.
ಕಳೆದ ವಾರ ಪಕ್ಷದ 80 ಶಾಸಕರಲ್ಲಿ 58 ಮಂದಿ ಅಧಿಕೃತ ಟಿಎಂಸಿ ಶಾಸಕಾಂಗ ಪಕ್ಷದಿಂದ ಬೇರ್ಪಟ್ಟು, ಉಚ್ಚಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷದ ಮಾನ್ಯತೆ ಪಡೆದಿದ್ದರು.
ಬಂಡಾಯ ತಂಡವು ತನ್ನ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿಕೊಂಡಿದೆ. ಈ ಬಿಕ್ಕಟ್ಟು ಬಳಿಕ ಸಂಸತ್ತಿಗೂ ವ್ಯಾಪಿಸಿದ್ದು, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಸಂಸದರು 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರ ಬೆಂಬಲ ತಮ್ಮೊಂದಿಗೆ ಇದೆ ಎಂದು ಹೇಳಿಕೊಂಡಿದ್ದಾರೆ. ಸಾಯೋನಿ ಘೋಷ್ ಹಾಗೂ ಮಾಲಾ ರಾಯ್ ಕೂಡ ಭಿನ್ನಮತೀಯ ಸಂಸದರ ಬಣವನ್ನು ಸೇರಿದ್ದಾರೆ ಎಂದು ಕೇಳಿಬಂದಿದೆ.
Advertisement