ದ್ವೇಷ ಮರೆತು ಮಾವನ ಪ್ರಾಣ ಉಳಿಸಿದ ಅಳಿಯ: ಕೋರ್ಟ್ ಆವರಣದಲ್ಲೇ ವಿಚ್ಛೇದನ ಪತ್ರ ಹರಿದು ಪತಿಯನ್ನು ಅಪ್ಪಿಕೊಂಡ ಪತ್ನಿ, 5 ವರ್ಷಗಳ ದಾಂಪತ್ಯ ಕಲಹ ಸುಖಾಂತ್ಯ..!

2020ರಲ್ಲಿ ಸಂಭ್ರಮದಿಂದ ವೈವಾಹಿಕ ಜೀವನ ಆರಂಭಿಸಿದ್ದ ಶಿಖಾ ಮತ್ತು ಸೌರಭ್ ಅವರ ಬದುಕು ಕೆಲವೇ ವರ್ಷಗಳಲ್ಲಿ ಭಿನ್ನಾಭಿಪ್ರಾಯ, ಆರೋಪ-ಪ್ರತ್ಯಾರೋಪ ಮತ್ತು ಕಲಹಗಳಿಂದ ತುಂಬಿಹೋಯಿತು.
representative image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೆಲವೊಮ್ಮೆ ವರ್ಷಗಳ ಕಾಲ ನಡೆಯುವ ಕಾನೂನು ಹೋರಾಟ, ಕೋಪ, ಅಹಂಕಾರ ಮತ್ತು ನೋವು ಸಾಧಿಸದ ಕೆಲಸವನ್ನು ಒಂದು ಸಣ್ಣ ಮಾನವೀಯ ನಡೆ ಸಾಧಿಸಿಬಿಡುತ್ತದೆ. ದೆಹಲಿಯ ನ್ಯಾಯಾಲಯವೊಂದರಲ್ಲಿ ನಡೆದ ಅಪರೂಪದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ಐದು ವರ್ಷಗಳ ಹೋರಾಟದ ಬಳಿಕ ಕೊನೆ ಕ್ಷಣದಲ್ಲಿ ಪರಸ್ಪರ ಅಪ್ಪಿಕೊಂಡು ಕಣ್ಣೀರಿಟ್ಟು ಒಂದಾಗಿರುವ ಸಿನಿಮೀಯ ಶೈಲಿಯ ಘಟನೆಯೊಂದು ದೆಹಲಿಯ ನ್ಯಾಯಾಲಯವೊಂದರಲ್ಲಿ ನಡೆದಿದೆ.

2020ರಲ್ಲಿ ಸಂಭ್ರಮದಿಂದ ವೈವಾಹಿಕ ಜೀವನ ಆರಂಭಿಸಿದ್ದ ಶಿಖಾ ಮತ್ತು ಸೌರಭ್ ಅವರ ಬದುಕು ಕೆಲವೇ ವರ್ಷಗಳಲ್ಲಿ ಭಿನ್ನಾಭಿಪ್ರಾಯ, ಆರೋಪ-ಪ್ರತ್ಯಾರೋಪ ಮತ್ತು ಕಲಹಗಳಿಂದ ತುಂಬಿಹೋಯಿತು.

ಸಂಬಂಧ ಉಳಿಸಿಕೊಳ್ಳುವ ಪ್ರಯತ್ನಗಳು ವಿಫಲವಾದ ಬಳಿಕ ಇಬ್ಬರೂ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಕಾಲ ಕಳೆದಂತೆ ಈ ಪ್ರಕರಣ ಕೇವಲ ದಾಂಪತ್ಯ ಕಲಹವಾಗಿರದೆ, ಕುಟುಂಬಗಳ ಮಾನಸಿಕ ಮತ್ತು ಆರ್ಥಿಕ ಹೋರಾಟವಾಗಿಯೂ ಪರಿಣಮಿಸಿತು.

ವಿಚ್ಛೇದನ ಪ್ರಕರಣ ವರ್ಷದಿಂದ ವರ್ಷಕ್ಕೆ ಮುಂದೂಡಿಕೆಯಾಗುತ್ತಲೇ ಇತ್ತು. ಅನೇಕ ವಿಚಾರಣೆಗಳು, ವಕೀಲರ ವಾದ-ಪ್ರತಿವಾದಗಳು, ನ್ಯಾಯಾಲಯದ ಸುತ್ತಾಟಗಳು ದಂಪತಿಯನ್ನು ಮಾತ್ರವಲ್ಲದೆ ಅವರ ಕುಟುಂಬಗಳನ್ನೂ ಸಂಕಷ್ಟಕ್ಕೆ ಸಿಲುಸಿದ್ದವು. ವಿಶೇಷವಾಗಿ ಶಿಖಾ ಅವರ ತಂದೆ, ಮಗಳ ಭವಿಷ್ಯದ ಚಿಂತೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಪ್ರಕರಣದ ವೆಚ್ಚ ಮತ್ತು ಮಾನಸಿಕ ಒತ್ತಡ ಕುಟುಂಬದ ಮೇಲೆ ದೊಡ್ಡ ಪರಿಣಾಮ ಬೀರಿತ್ತು.

representative image
ವಿಚ್ಛೇದನ ಪಡೆದ ಒಂದೇ ವರ್ಷಕ್ಕೆ ಕ್ರಿಕೆಟಿಗ ಚಹಲ್-ಧನಶ್ರೀ ವರ್ಮಾ ಮತ್ತೆ ಒಂದು? Video ವೈರಲ್, ಅಸಲೀಯತ್ತೇನು?

ಈ ನಡುವೆ ಶಿಖಾ ಅವರ ತಂದೆಗೆ ಹೃದಯಾಘಾತ ಸಂಭವಿಸಿತ್ತು. ಆರ್ಥಿಕ ಸಂಕಷ್ಟದಿಂದ ಅವರನ್ನು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬ ಸಂಕಷ್ಟದಲ್ಲಿದ್ದಾಗ, ಸಂಬಂಧ ಕಡಿದುಕೊಳ್ಳಲು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ಸೌರಭ್ ಅಚ್ಚರಿಯ ಹೆಜ್ಜೆ ಇಟ್ಟರು.

ಮಾವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ, ಅವರು ಗುರುಗ್ರಾಮದ ಉತ್ತಮ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದರು. ಚಿಕಿತ್ಸೆಗಾಗಿ ಅಗತ್ಯ ವ್ಯವಸ್ಥೆ ಕಲ್ಪಿಸಿ, ಮಾವನ ಪ್ರಾಣ ಉಳಿಸಲು ಪ್ರಮುಖ ಪಾತ್ರ ವಹಿಸಿದರು. ವಿಚ್ಛೇದನದ ಅಂಚಿನಲ್ಲಿದ್ದ ಅಳಿಯನ ಈ ನಡೆ ಕುಟುಂಬದ ಮನಸ್ಸು ಗೆದ್ದಿತ್ತು.

ಮಾವ ಚೇತರಿಸಿಕೊಂಡ ಮರುದಿನವೇ ವಿಚ್ಛೇದನ ಪ್ರಕರಣದ ಮತ್ತೊಂದು ವಿಚಾರಣೆ ನಡೆಯಿತು. ಎಂದಿನಂತೆ ವಕೀಲರು ತಮ್ಮ ವಾದ ಮಂಡಿಸುತ್ತಿದ್ದರು. ಆದರೆ, ಆ ದಿನದ ವಾತಾವರಣವೇ ಬೇರೆ ಆಗಿತ್ತು.

ನ್ಯಾಯಾಧೀಶರು ಸೌರಭ್ ಅವರನ್ನು ನೋಡಿ, "ನಿಮಗೆ ಇನ್ನೂ ವಿಚ್ಛೇದನ ಬೇಕೇ?" ಎಂದು ಕೇಳಿದರು. ಸೌರಭ್ ಉತ್ತರಿಸುವ ಮುನ್ನ ಶಿಖಾ ಅವರತ್ತ ನೋಡುತ್ತಾ ಸಣ್ಣ ನಗು ಬೀರಿದರು.

ಆ ಒಂದು ನೋಟ, ಒಂದು ನಗು ಮತ್ತು ಕಳೆದ ಕೆಲವು ದಿನಗಳಲ್ಲಿ ಕಂಡ ಮಾನವೀಯತೆಯ ನಡೆ ಶಿಖಾ ಅವರ ಮನಸ್ಸಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಐದು ವರ್ಷಗಳ ಕೋಪ, ಅಸಮಾಧಾನ ಮತ್ತು ನೋವು ಕ್ಷಣಾರ್ಧದಲ್ಲಿ ಕರಗಿದಂತಾಯಿತು.

representative image
ಪ್ರೀತಿಯ ಬೆಲೆ ಗೊತ್ತಿಲ್ಲ?: ವಿಚ್ಛೇದನ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ನಟಿ ನಿವೇದಿತಾ ಗೌಡ

ಹಠಾತ್ತನೆ ಅವರು ಕೈಯಲ್ಲಿದ್ದ ವಿಚ್ಛೇದನ ಪತ್ರಗಳನ್ನು ಹರಿದುಹಾಕಿದರು. ಬಳಿಕ ಕೋರ್ಟ್‌ನಲ್ಲೇ ಪತಿಯತ್ತ ಓಡಿ ಹೋಗಿ ಅಪ್ಪಿಕೊಂಡರು. ಇಬ್ಬರೂ ಕಣ್ಣೀರಿಡುತ್ತಿದ್ದ ದೃಶ್ಯವನ್ನು ಕಂಡು ನ್ಯಾಯಾಲಯದಲ್ಲಿದ್ದವರು ಕ್ಷಣಕಾಲ ಮೌನಕ್ಕೆ ಶರಣಾದರು.

ಈ ಘಟನೆ ಕೇವಲ ಒಂದು ದಂಪತಿಯ ಮರುಮಿಲನದ ಕಥೆಯಲ್ಲ. ಸಂಬಂಧಗಳಲ್ಲಿ ಕೋಪ, ಅಹಂಕಾರ ಮತ್ತು ತಪ್ಪು ತಿಳುವಳಿಕೆ ಎಷ್ಟೇ ಆಳವಾಗಿದ್ದರೂ, ಸಹಾನುಭೂತಿ ಮತ್ತು ಮಾನವೀಯತೆ ಅವುಗಳನ್ನು ಮೀರಿಸಬಲ್ಲವು ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.

ಇಂದಿನ ವೇಗದ ಜೀವನದಲ್ಲಿ ಸಂಬಂಧಗಳು ಸಣ್ಣ ಕಾರಣಗಳಿಗೂ ಮುರಿದು ಬೀಳುತ್ತಿವೆ. ಆದರೆ, ಕೆಲವೊಮ್ಮೆ ಒಬ್ಬರ ನೋವನ್ನು ಅರ್ಥಮಾಡಿಕೊಳ್ಳುವುದು, ಸಂಕಷ್ಟದ ಸಮಯದಲ್ಲಿ ಜೊತೆ ನಿಲ್ಲುವುದು ಮತ್ತು ಅಹಂಕಾರವನ್ನು ಬದಿಗಿಡುವುದು ಸಂಬಂಧಗಳಿಗೆ ಹೊಸ ಜೀವ ತುಂಬಬಹುದು.

ದೆಹಲಿಯ ಈ ದಂಪತಿಯ ಕಥೆ, ಪ್ರೀತಿಗಿಂತಲೂ ದೊಡ್ಡದು ಕಾಳಜಿ ಮತ್ತು ಮಾನವೀಯತೆ ಎಂಬ ಸಂದೇಶವನ್ನು ನೀಡಿದೆ. ಕೆಲವೊಮ್ಮೆ ಒಂದು ಒಳ್ಳೆಯ ಕೆಲಸ, ಸಾವಿರ ಮಾತುಗಳಿಗಿಂತ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com