

ಜೈಪುರ: ನೀಟ್ ಪರೀಕ್ಷಾ ಅವಾಂತರದ ವಿರುದ್ಧ ಪ್ರತಿಭಟನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಸಂಸ್ಥಾಪಕ ಅಭಿಜಿತ್ ದಿಪ್ಕೆ (Abhijeet Dipke)ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಲಾಗಿದೆ.
ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಪ್ರತಿಭಟನೆಯ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯತ್ತ ತೆರಳುತ್ತಿದ್ದಾಗ ಗುಂಪಿನಲ್ಲಿದ್ದ ಕೆಲವರು ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವೈರಲ್ ಆಗುತ್ತಿದೆ.
ಮಧ್ಯಾಹ್ನ 3 ಗಂಟೆಗೆ ಶಹೀದ್ ಸ್ಮಾರಕ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದಿಪ್ಕೆ ಕರೆ ನೀಡಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಅವರು ತೆರಳುತ್ತಿದ್ದ ವೇಳೆ ಪರಿಸ್ಥಿತಿ ಹಠಾತ್ ಉದ್ವಿಗ್ನಗೊಂಡಿತು.
ವರದಿಗಳ ಪ್ರಕಾರ, ದಿಪ್ಕೆ ಅವರನ್ನು ಅವರ ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು ಸಾಗಿಸುತ್ತಿದ್ದ ವೇಳೆ ಕೆಲವರು ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಅನ್ನು ಎಳೆದರು. ಈ ವೇಳೆ ಅಭಿಜಿತ್ ಕೆಳಕ್ಕೆ ಬಗ್ಗುತ್ತಲೇ ಕೆಲವರು ಅಭಿಜಿತ್ ರನ್ನು ಹಿಡಿದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದರು ಮತ್ತು ಕೆಳಗೆ ಎಳೆಯಲು ಯತ್ನಿಸಿದರು. ಈ ಅನಿರೀಕ್ಷಿತ ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಅಂತೆಯೇ ಅಭಿಜಿತ್ ದಿಪ್ಕೆ ಅವರನ್ನು ಸುತ್ತುವರಿದು ಕೆಲವರು ತಳ್ಳಾಟ-ನೂಕಾಟ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮಧ್ಯಪ್ರವೇಶಿಸಿದರೆಂದು ವರದಿಯಾಗಿದೆ. ಸದ್ಯಕ್ಕೆ ಹಲ್ಲೆ ನಡೆಸಿದವರ ಗುರುತು ಅಥವಾ ಹಲ್ಲೆಯ ಹಿಂದಿನ ಉದ್ದೇಶದ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹೇಡಿತನದ ಕೃತ್ಯ
ಇನ್ನು ತಮ್ಮ ಮೇಲಿನ ಹಲ್ಲೆ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಭಿಜಿತ್ ದಿಪ್ಕೆ, ದೈಹಿಕ ದಾಳಿಗಳು ಭಯ ಮತ್ತು ಹೇಡಿತನದ ಸಂಕೇತ ಎಂದು ಕಿಡಿಕಾರಿದ್ದಾರೆ.
'ನಾವು ಶಾಂತಿಯುತವಾಗಿ ನಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ. ನಾನು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿ, ಮತ್ತು ನಾನು ಈ ಯುದ್ಧವನ್ನು ಶಾಂತಿ ಮತ್ತು ಪ್ರೀತಿಯಿಂದ ಹೋರಾಡುತ್ತಲೇ ಇರುತ್ತೇನೆ' ಎಂದಿದ್ದಾರೆ.
ಅಲ್ಲದೆ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಲೇಬೇಕು ಎಂದು ಪುನರುಚ್ಚರಿಸಿದ್ದಾರೆ.
ದೇಶವ್ಯಾಪಿ CJP ಪ್ರತಿಭಟನೆಗಳು
Cockroach Janta Party (CJP) ಎಂಬ ವ್ಯಂಗ್ಯಾತ್ಮಕ ವೇದಿಕೆ ಈ ಹಿಂದೆ ದೇಶವ್ಯಾಪಿ ಪ್ರತಿಭಟನಾ ಅಭಿಯಾನ ಆರಂಭಿಸಿತ್ತು. ಇದರ ಮೊದಲ ಹಂತವಾಗಿ ನವದೆಹಲಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ನಂತರ ಅಮೃತಸರ, ಪುಣೆ, ಬೆಂಗಳೂರು, ಹೈದರಾಬಾದ್ ಹಾಗೂ ಲಖನೌ ಸೇರಿದಂತೆ ಹಲವು ನಗರಗಳಲ್ಲಿ ಯುವಜನರ ಪ್ರತಿಭಟನೆಗಳು ನಡೆದವು.
ದಿಪ್ಕೆ ಅವರ ಪ್ರಕಾರ, ಈ ಚಳವಳಿ ಈಗ ದೇಶಾದ್ಯಂತ ವಿಸ್ತರಿಸುತ್ತಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡದಿದ್ದರೆ ದೆಹಲಿಯಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
NEET ಪ್ರಶ್ನೆಪತ್ರಿಕೆ ಸೋರಿಕೆ, CBSE OSM ಸಂಬಂಧಿತ ಸಮಸ್ಯೆಗಳು, ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಯುವಜನರ ಧ್ವನಿಯಾಗಿ ಈ ಚಳವಳಿ ಮುಂದುವರಿಯಲಿದೆ ಎಂದು ಅಭಿಜಿತ್ ದಿಪ್ಕೆ ಹೇಳಿದ್ದಾರೆ. ಇನ್ನು ಈಗಾಗಲೇ ಈ ಪ್ರತಿಭಟನೆಗೆ ಪ್ರಮುಖರು ಬೆಂಬಲ ಸೂಚಿಸಿದ್ದು, ಖ್ಯಾತ ಹೋರಾಟಗಾರ ಸೋನಂ ವಾಂಗ್ಚುಕ್, ನಟ ಪ್ರಕಾಶ್ ರೈ ಮತ್ತು ಇತರರು ಈ ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದಾರೆ.
Advertisement