

ತಿರುವನಂತಪುರಂ: ಕರ್ನಾಟಕ ಸರ್ಕಾರದ 'ಶಕ್ತಿ ಯೋಜನೆ'ಯಂತೆ ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳ ಸರ್ಕಾರ ಸೋಮವಾರ ಚಾಲನೆ ನೀಡಿದೆ.
ತಂಪನೂರು ಕೇಂದ್ರ ಬಸ್ ನಿಲ್ದಾಣದಲ್ಲಿಈ ಯೋಜನೆಯನ್ನು ಮುಖ್ಯಮಂತ್ರಿ ವಿ.ಡಿ.ಸತೀಶನ್ ಉದ್ಘಾಟಿಸಿದರು. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ ಬಸ್ ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಗಣ್ಯರು ಬಸ್ ನಿಲ್ದಾಣದಿಂದ ಸಚಿವಾಲಯದವರೆಗೂ ಬಸ್ ನಲ್ಲಿ ತೆರಳಿದರು.
ಈ ಯೋಜನೆಯಡಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಡೆಸುವ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯದಾದ್ಯಂತ ಸುಮಾರು 3,125 ಸಾಮಾನ್ಯ ಬಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.
ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್ ಟು ಟೌನ್, ಪಾಯಿಂಟ್ ಟು ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ಏಳು ವಿಭಾಗದ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಪ್ರಯಾಣಿಕರಿಗೆ ಗುರುತಿಸಲು ಅರ್ಹ ಬಸ್‌ಗಳ ಮೇಲೆ ವಿಶೇಷ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ.
ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಸತೀಶನ್ ಹೇಳಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ದಾನವಲ್ಲ. ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಯೋಜನೆಯಿಂದ KSRTCಗೆ ಆಗುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಖಾಸಗಿ ಬಸ್‌ಗಳಿಗೂ ಯಾವುದೇ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
"ಈ ಯೋಜನೆಗಾಗಿ ವಾರ್ಷಿಕವಾಗಿ ಸುಮಾರು 800 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ನಿಗಮದ ಆದಾಯವನ್ನು ಹೆಚ್ಚಿಸುವಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ. ಖಾಸಗಿ ಬಸ್ ನಿರ್ವಾಹಕರು ಕಳವಳ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸರ್ಕಾರ ಕಾರ್ಯ ವಿಧಾನವೊಂದನ್ನು ಪರಿಚಯಿಸಲಿದೆ. ಯಾವುದೇ ವಲಯ ಕುಸಿಯಬಾರದು ಮತ್ತು ತೊಂದರೆ ಎದುರಿಸುತ್ತಿರುವ ವಲಯಗಳನ್ನು ಬೆಂಬಲಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಿಯದರ್ಶಿನಿ ಯೋಜನೆಯು ಕೇರಳದ ಮಹಿಳೆಯರಿಗೆ ಸರ್ಕಾರ ನೀಡುವ ಗೌರವದ ಸಂಕೇತವಾಗಿದೆ. ಸಮಾಜ ಮಹಿಳೆಯರನ್ನು ಗೌರವಿಸಲು ಕಲಿಯಬೇಕು ಎಂಬ ಸಂದೇಶವೂ ಆಗಿದೆ. ಇದು ಕೇರಳಕ್ಕೆ ಹೆಮ್ಮೆಯ ಕ್ಷಣ" ಎಂದು ಬಣ್ಣಿಸಿದ ಸತೀಶನ್, ಇದು ಮಹಿಳೆಯರಿಗೆ ನೀಡುವ ಉಚಿತ ಯೋಜನೆ ಅಲ್ಲ. ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಹೊಂದಿರುವ ದೂರದೃಷ್ಟಿಯ ಯೋಜನೆಯಾಗಿದೆ. ಮಹಿಳೆಯರು ಈಗ ಹೆಮ್ಮೆಯಿಂದ ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ.
Advertisement