

ನವದೆಹಲಿ: ಇತ್ತೀಚೆಗಷ್ಟೇ ವಿವಾಹವಾಗಿ ಹನಿಮೂನ್ ಗೆ ತೆರಳಿದ್ದ ದೆಹಲಿ ಮೂಲದ ಮಹಿಳಾ ಟೆಕ್ಕಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಮಸೂರಿಯಲ್ಲಿ ನಡೆದಿದ್ದು, ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ದೆಹಲಿಯ 27 ವರ್ಷದ ಐಟಿ ವೃತ್ತಿಪರ ಮಹಿಳೆಯೊಬ್ಬರು ಉತ್ತರಾಖಂಡದ ಮಸೂರಿಯ ಹೋಂಸ್ಟೇಯೊಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಲ್ಲಿನ ಕೊಠಡಿಯಲ್ಲಿ ಮೂತ್ರ ಮತ್ತು ರಕ್ತದ ಮಡುವಿನಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಹಿಳಾ ಟೆಕ್ಕಿಯನ್ನು ಪಿ.ರಾಧಾ ಗಾಯತ್ರಿ (P Radha Gayatri) ಎಂದು ಗುರುತಿಸಲಾಗಿದ್ದು, ಆಕೆ ಗುರುಗ್ರಾಮದ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ದೆಹಲಿಯ ಕಿದ್ವಾಯಿ ನಗರ ಪೂರ್ವ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ರಾಧಾ ಗಾಯತ್ರಿ ಅವರು ತಮ್ಮ ಪತಿ ಸೌಮ್ಯ ಶ್ರೀಚರಣ್ ಜೊತೆ ಉತ್ತರಾಖಂಡದಲ್ಲಿ ಹನಿಮೂನ್ ನಲ್ಲಿದ್ದರು. ಸೌಮ್ಯ ಶ್ರೀಚರಣ್ ಕೂಡ ಐಟಿ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದು, ಪುಣೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಗಾಯತ್ರಿ ಮತ್ತು ಅವರ ಪತಿ ಜೂನ್ 13ರಂದು ದೆಹಲಿಯಿಂದ ಋಷಿಕೇಶ್‌ಗೆ ಪ್ರಯಾಣ ಬೆಳೆಸಿದ ಬಳಿಕ, ಜೂನ್ 14ರ ತಡರಾತ್ರಿ ಮಸೂರಿಯ ಟಿಪ್ರಿಧಾರ್ ಪ್ರದೇಶದಲ್ಲಿರುವ ಕಿಯಾನಾ ಹೋಂಸ್ಟೇಗೆ ತಲುಪಿದ್ದರು. ರಾತ್ರಿ ಸುಮಾರು 11:30ಕ್ಕೆ ಅವರು 'ಬ್ಲಿಸ್' ಎಂಬ ಕೊಠಡಿಗೆ ಪ್ರವೇಶಿಸಿದ್ದರು.
ನಿದ್ರೆಯಿಂದೆದ್ದ ಪತಿಗೆ ಕಾದಿದ್ದು ಭಾರಿ ಆಘಾತ
ಪತಿಯ ಹೇಳಿಕೆಯ ಪ್ರಕಾರ, ದಂಪತಿ ರಾತ್ರಿ ಮದ್ಯಪಾನ ಮಾಡಿದ್ದು, ಸುಮಾರು ಬೆಳಗಿನ ಜಾವ 3:30ಕ್ಕೆ ನಿದ್ರೆಗೆ ಜಾರಿದ್ದರು. ಮರುದಿನ ಬೆಳಿಗ್ಗೆ ಎದ್ದಾಗ, ಪತ್ನಿ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ನೆಲದ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಅವರು ಕಂಡಿದ್ದಾರೆ. ಆಕೆಯ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದು, ಸುತ್ತಮುತ್ತ ಮೂತ್ರ ಮತ್ತು ರಕ್ತದ ಗುರುತುಗಳಿದ್ದವು ಎಂದು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಹೋಂಸ್ಟೇಯಲ್ಲಿ ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂಬ ಮಾಹಿತಿ ಮಸೂರಿ ಪೊಲೀಸರಿಗೆ ಲಭಿಸಿತ್ತು. ಪೊಲೀಸರು 108 ಆಂಬುಲೆನ್ಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಆಂಬುಲೆನ್ಸ್‌ನ ಔಷಧ ತಜ್ಞರು ಮಹಿಳೆಯನ್ನು ಪರೀಕ್ಷಿಸಿ, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರ ಹೇಳಿಕೆಯ ಪ್ರಕಾರ, ಮಹಿಳೆಯ ಮೃತದೇಹವು ಬಟ್ಟೆ ಇಲ್ಲದ ಸ್ಥಿತಿಯಲ್ಲಿ ನೆಲದ ಮೇಲೆ ಪತ್ತೆಯಾಗಿದೆ. ಹಾಸಿಗೆಯ ಚಾದರದ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಕೊಠಡಿಯಿಂದ ಎರಡು ಖಾಲಿ ಮದ್ಯದ ಬಾಟಲಿಗಳು ಹಾಗೂ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡೆಹ್ರಾಡೂನ್‌ನ Coronation Hospital ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡದಿಂದ ನಡೆಸಿ, ಅದರ ವಿಡಿಯೊ ಚಿತ್ರೀಕರಣ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸದ್ಯ ಪ್ರಕರಣದ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ವಿವಾಹ
ಈ ದಂಪತಿ 2025ರ ನವೆಂಬರ್ 8ರಂದು ವಿವಾಹವಾಗಿದ್ದರು. ಗಾಯತ್ರಿ ಮತ್ತು ಶ್ರೀಚರಣ್ ಇಬ್ಬರೂ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಗಳಾಗಿದ್ದಾರೆ.
Advertisement