

ಒಡಿಶಾ: ಅಪಹರಣಕಾರರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು, ಮಹಿಳಾ ಎನ್ ಜಿಎ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಅಲ್ಲದೇ ಪುರುಷ ಸಹೋದ್ಯೋಗಿಯ ಮೇಲೂ ಹಲ್ಲೆ ನಡೆಸಿದ್ದಾರೆ.
ಸ್ಥಳೀಯ ಕೆಲ ಮಕ್ಕಳಿಗೆ ಬಿಸ್ಕೆಟ್ ನೀಡಿದ್ದೆ ತಪ್ಪಾಗಿದ್ದು, ಎನ್ ಜಿಎ ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಒಡಿಶಾದ ಕಂಧಮಾಲ್ ಜಿಲ್ಲೆಯ ಎನ್‌ಜಿಒವೊಂದರಲ್ಲಿ ಕೆಲಸ ಮಾಡುವ ಈ ಕಾರ್ಯಕರ್ತರು ಮೊಬೈಲ್ ಆ್ಯಪ್ ತಪ್ಪಾಗಿ ತೋರಿಸಿದ ಮಾರ್ಗದಲ್ಲಿ ಸಂಚರಿಸಿ ಹಿಗ್ಗಾಮುಗ್ಗಾ ಗೂಸಾ ತಿಂದಿದ್ದಾರೆ.
ಮಹಿಳಾ ಎನ್ ಜಿ ಒ ಕಾರ್ಯಕರ್ತೆ, ಕಲಹಂಡಿಯ ಥುಮುಲ್ ರಾಂಪುರ ಕಡೆಗೆ ಪುರುಷ ಸಹೋದ್ಯೋಗಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ನ್ಯಾವಿಗೇಷನ್ ವ್ಯವಸ್ಥೆ ಬಳಸುತ್ತಿದ್ದರು ಎನ್ನಲಾಗಿದೆ. ಸರಿಯಾದ ಮಾರ್ಗ ಗೊತ್ತಿಲ್ಲದೆ ರಾಯಗಢ ಜಿಲ್ಲೆ ಪ್ರವೇಶಿಸಿದ್ದಾರೆ.
ಈ ವೇಳೆ ಸರಿಯಾದ ದಾರಿಯ ಬಗ್ಗೆ ತಿಳಿಯಲು ಗ್ರಾಮಸ್ಥರನ್ನು ವಿಚಾರಿಸಿದ್ದಾರೆ. ಅಲ್ಲಿದ್ದ ಕೆಲ ಮಕ್ಕಳಿಗೆ ಬಿಸ್ಕೆಟ್ ನೀಡಿದ್ದಾರೆ. ಕೂಡಲೇ ಅವರು ಮಕ್ಕಳ ಕಳ್ಳರು ಎಂದು ಊರು ತುಂಬೆಲ್ಲಾ ಸುದ್ದಿ ಹರಡಿದೆ.
ಕೂಡಲೇ ಜಮಾಯಿಸಿದ ಗುಂಪೊಂದು ತನ್ನ ಸ್ಕೂಟರ್ ನಿಲ್ಲಿಸಿ , ಕೀ ತೆಗೆದು, ಗುರುತಿನ ದಾಖಲೆಗಳನ್ನು ಕೇಳಿತು. ಗುರುತಿನ ಚೀಟಿ ತೋರಿಸಿದರೂ, ಉದ್ರಿಕ್ತ ಗುಂಪಿಗೆ ಸಮಾಧಾನವಾಗಲಿಲ್ಲ. ಬಳಿಕ ತನನ್ನು ಥಳಿಸಿ ಬಟ್ಟೆಗಳನ್ನು ಹರಿದು ಹಾಕಿತು. ಸಹೋದ್ಯೋಗಿಯ ಮೇಲೂ ಹಲ್ಲೆ ನಡೆಸಿತು. ಬಳಿಕ ಸ್ಥಳೀಯರು ನಮ್ಮನ್ನು ರಕ್ಷಿಸಿದರು ಎಂದು ಮಹಿಳಾ ಕಾರ್ಯಕರ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಲವಾರು ಗ್ರಾಮಸ್ಥರು ಈ ಕೃತ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ನಂತರ, ಎನ್ ಜಿಒ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಇಬ್ಬರು ಸಂತ್ರಸ್ತರನ್ನು ರಕ್ಷಿಸಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ರಾಯಗಡ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಿ ಬಿಡುಗಡೆ ಮಾಡಲಾಯಿತು ಎಂದು ರಾಯಗಡ ಎಸ್ಪಿ ರಾಜ್ ಪ್ರಸಾದ್ ಸುದ್ದಿಸಂಸ್ಥೆ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದರು.
ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement