

ಕೋಲ್ಕತಾ: ವಯಸ್ಸು ಹೆಚ್ಚಾದಂತೆ ಅನಾರೋಗ್ಯವೂ ಹೆಚ್ಚಬೇಕು ಎಂಬ ಕಲ್ಪನೆಯನ್ನು ಬದಲಾಯಿಸುವ ಸಮಯ ಬಂದಿದೆ. ಯೋಗವು ಕೇವಲ ದೇಹವನ್ನು ಸದೃಢಗೊಳಿಸುವ ಸಾಧನವಲ್ಲ, ಆರೋಗ್ಯಕರ ಮತ್ತು ಚೈತನ್ಯಭರಿತ ವೃದ್ಧಾಪ್ಯಕ್ಕೆ ದಾರಿಯಾಗಿದೆ. 70ರ ವಯಸ್ಸಿನಲ್ಲಿ 50ರ ವಯಸ್ಸಿಗಿಂತ ಹೆಚ್ಚು ಆರೋಗ್ಯವಂತರಾಗಿರಬೇಕು. ಹೀಗಾಗಿ ಯೋಗವನ್ನು ಒಂದು ದಿನಕ್ಕೆ ಸೀಮಿತಗೊಳಿಸಬೇಡಿ, ಜೀವನದ ಭಾಗವಾಗಿಸಿಕೊಳ್ಳಿ" ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಈ ವರ್ಷದ ವಿಷಯವನ್ನು ಉಲ್ಲೇಖಿಸಿದ ಅವರು, ವಯಸ್ಸು ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದರೂ, ಆರೋಗ್ಯ ಮತ್ತು ಸಾಮರ್ಥ್ಯ ಕುಗ್ಗುವುದು ಅನಿವಾರ್ಯವಲ್ಲ ಎಂದು ಹೇಳಿದರು.
ನಮ್ಮ ಗುರಿ 70ರ ವಯಸ್ಸಿನಲ್ಲಿ 50ರ ವಯಸ್ಸಿಗಿಂತ ಹೆಚ್ಚು ಜೀವನಶೈಲಿ ಕಾಯಿಲೆಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದಾಗಿರಬೇಕು. 40ರ ವಯಸ್ಸಿನಲ್ಲಿ 20ರ ವಯಸ್ಸಿಗಿಂತ ಹೆಚ್ಚು ಲವಲವಿಕೆ, 50ರ ವಯಸ್ಸಿನಲ್ಲಿ 30ರ ವಯಸ್ಸಿಗಿಂತ ಹೆಚ್ಚು ಚೈತನ್ಯ ಹೊಂದಿರಬೇಕು. ಯೋಗವು ಈ ಗುರಿಗಳನ್ನು ಸಾಧಿಸಲು ನೆರವಾಗುವ ಶಕ್ತಿಶಾಲಿ ಸಾಧನವಾಗಿದೆ.
ಇದೇವೇಳೆ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು, ಸ್ಥೂಲಕಾಯತೆ ಹಾಗೂ ಒತ್ತಡದಿಂದ ಉಂಟಾಗುವ ಅನಾರೋಗ್ಯಗಳು ವೇಗವಾಗಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಇಂತಹ ಜೀವನಶೈಲಿ ಕಾಯಿಲೆಗಳಿಂದ ದೂರವಿರಲು ಯೋಗ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಯಮಿತ ಯೋಗಾಭ್ಯಾಸವು ದೇಹದ ಲವಚಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ ಎಂದು ತಿಳಿಸಿದರು.
ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸುವ ಸಮಗ್ರ ಜೀವನ ಪದ್ಧತಿ. ಪ್ರತಿದಿನ ಕೆಲ ನಿಮಿಷಗಳ ಯೋಗಾಭ್ಯಾಸವು ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಯೋಗವು ನಮಗೆ ಆರೋಗ್ಯ ಮಾತ್ರ ನೀಡುವುದಿಲ್ಲ. ಅದು ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಿಸುತ್ತದೆ. ಯೋಗದ ಮೂಲಕ ನಾವು ದೈಹಿಕವಾಗಿ ಸದೃಢರಾಗುವುದರ ಜೊತೆಗೆ ಮಾನಸಿಕವಾಗಿ ಶಾಂತ ಮತ್ತು ಸಮತೋಲನಯುತ ವ್ಯಕ್ತಿಗಳಾಗಬಹುದು ಎಂದರು.
ಇದೇ ವೇಳೆ ಯೋಗ ದಿನವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸಬಾರದು ಎಂದು ಕರೆ ನೀಡಿದ ಮೋದಿ, ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕುಟುಂಬದ ಸದಸ್ಯರು, ಮಕ್ಕಳು ಮತ್ತು ಯುವಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಗಾಳದ ಆಧ್ಯಾತ್ಮಿಕ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ, ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಕೊಡುಗೆಯನ್ನು ಪ್ರಶಂಸಿಸಿದರು.
ಬಂಗಾಳದ ಈ ಪವಿತ್ರ ನೆಲವು ಭಾರತಕ್ಕೆ ಅನೇಕ ಮಹಾನ್ ಸಂತರು ಮತ್ತು ಚಿಂತಕರನ್ನು ನೀಡಿದೆ. ಸ್ವಾಮಿ ವಿವೇಕಾನಂದರು ಭಾರತೀಯ ಯೋಗ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಜಗತ್ತಿನಾದ್ಯಂತ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.
ತಮ್ಮ ಭಾಷಣದ ಕೊನೆಯಲ್ಲಿ, “ಯೋಗವನ್ನು ಒಂದು ದಿನದ ಆಚರಣೆಯಾಗಿ ನೋಡದೆ, ಜೀವನದ ನಿರಂತರ ಅಭ್ಯಾಸವನ್ನಾಗಿ ಮಾಡೋಣ. ಆರೋಗ್ಯಕರ ವ್ಯಕ್ತಿ, ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗವನ್ನು ಅಳವಡಿಸಿಕೊಳ್ಳೋಣ” ಎಂದು ದೇಶದ ಜನತೆಗೆ ಕರೆ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದ ವಿವಿಧ ರಾಜ್ಯಗಳು ಹಾಗೂ ವಿಶ್ವದ ಅನೇಕ ದೇಶಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆಯುತ್ತಿದ್ದು, ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುತ್ತಿದ್ದಾರೆ.
ಕೋಲ್ಕತ್ತಾದ ಕಾರ್ಯಕ್ರಮದಲ್ಲಿ ಸಾವಿರಾರು ಯೋಗಾಸಕ್ತರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.
Advertisement