

ಬೊಕಾರೊ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಮಂಗಳವಾರ 17 ವರ್ಷದ ಬಾಲಕಿಯೊಬ್ಬಳು 100 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ ತನ್ನ 22 ವರ್ಷದ ಗೆಳೆಯನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಅಪ್ರಾಪ್ತ ಬಾಲಕಿಯ ಪ್ರಿಯಕರನನ್ನು ಎರಡು ದಿನಗಳ ಹಿಂದೆ, ಆಕೆಯನ್ನು ಅಪಹರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
"ಆದರೆ ಹುಡುಗಿ ಇಂದು ಬೆಳಗ್ಗೆ ಗೋಮಿಯಾದ ಧೆಂಧೆ ಗ್ರಾಮದಲ್ಲಿರುವ ಮೊಬೈಲ್ ಟವರ್ ಹತ್ತಿದ್ದಾಳೆ ಮತ್ತು ತನ್ನ ಬೇಡಿಕೆ ಈಡೇರಿಸದಿದ್ದರೆ ಮೇಲಿನಿಂದ ಹಾರುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಬಾಲಕಿ ಪಕ್ಕದ ಲಾಲ್‌ಪಾನಿಯಾ ಪ್ರದೇಶದವಳು" ಎಂದು ಗೋಮಿಯಾ ಪೊಲೀಸ್ ಠಾಣಾಧಿಕಾರಿ ಪ್ರಫುಲ್ ಕುಮಾರ್ ಮಹ್ತೊ ಅವರು ಪಿಟಿಐಗೆ ತಿಳಿಸಿದ್ದಾರೆ.
ಬಾಲಕಿಯನ್ನು ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಬಾಲಕಿಯ ತಾಯಿ ಜೂನ್ 18 ರಂದು ತನ್ನ ಮಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಬಾಲಕಿ ಮತ್ತು ಆಕೆಯ ಪ್ರೇಮಿಯನ್ನು ರಾಂಚಿಯ ಸುಖ್‌ದೇವ್ ನಗರದಲ್ಲಿ ಪತ್ತೆಹಚ್ಚಲಾಯಿತು ಮತ್ತು ಹುಡುಗಿಯನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಲಾಯಿತು ಎಂದು ಲಾಲ್‌ಪಾನಿಯಾ ಪೊಲೀಸ್ ಠಾಣಾಧಿಕಾರಿ ಜೈಪ್ರಕಾಶ್ ಎಕ್ಕಾ ತಿಳಿಸಿದ್ದಾರೆ.
ರಾಂಚಿಯ ಮೂಲದ ಆ ವ್ಯಕ್ತಿ ಪ್ರಸ್ತುತ ತೆನುಘಾಟ್ ಜೈಲಿನಲ್ಲಿದ್ದಾನೆ ಎಂದು ಅವರು ಹೇಳಿದ್ದಾರೆ.
Advertisement