

ನವದೆಹಲಿ: ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಗಳಲ್ಲಿ ಅಕ್ರಮ ನಡೆದಿರುವ ಆರೋಪಗಳ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಮಂದಿರಕ್ಕೆ ದೇಣಿಗೆಯಾಗಿ ನೀಡಲಾಗಿದ್ದ 200 ಬೆಳ್ಳಿ ಇಟ್ಟಿಗೆಗಳ ಬಗ್ಗೆ ಯಾವುದೇ ಲೆಕ್ಕಪತ್ರ ಲಭ್ಯವಿಲ್ಲ ಎಂದು ಖ್ಯಾತ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ.
ಕ್ಯಾಸಲ್ಸ್ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಜು ವಿ. ಮನ್ವಾನಿ ಅವರು, ಸಿಂಧಿ ಸಮುದಾಯದ ಪರವಾಗಿ ತಲಾ ಒಂದು ಕೆಜಿ ತೂಕದ 200 ಬೆಳ್ಳಿ ಇಟ್ಟಿಗೆಗಳನ್ನು 2021ರ ಜನವರಿ 26ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಲಾಗಿತ್ತು.
ಆದರೆ ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ರಸೀದಿಯನ್ನು ನೀಡಲಾಗಿಲ್ಲ. ಬೆಳ್ಳಿಯನ್ನು ಯಾವ ಉದ್ದೇಶಕ್ಕೆ ಹಾಗೂ ಹೇಗೆ ಬಳಸಬೇಕು ಎಂಬುದರ ಕುರಿತು ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟ್ರಸ್ಟ್ ಅಧಿಕಾರಿಗಳು ದಾನಿಗಳಿಗೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಬೆಳ್ಳಿಯ ಬಳಕೆಯ ಬಗ್ಗೆ ಸ್ಪಷ್ಟನೆ ಕೋರಿದ ದಾನಿಗಳು
ಅಂತೆಯೇ ರಾಮ ಮಂದಿರ ದೇಣಿಗೆಗಳ ನಿರ್ವಹಣೆಯಲ್ಲಿ ಅಕ್ರಮಗಳಾಗಿವೆ ಎಂಬ ಇತ್ತೀಚಿನ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ತಮ್ಮಲ್ಲಿ ಆತಂಕ ಹೆಚ್ಚಾಗಿದೆ ಎಂದು ಮನ್ವಾನಿ ಹೇಳಿದ್ದಾರೆ. "ನಾವು ಬೆಳ್ಳಿಯನ್ನು ಎಲ್ಲಿಗೆ ಬಳಸುತ್ತಾರೆ ಎಂದು ಎಂದಿಗೂ ಪ್ರಶ್ನಿಸಿರಲಿಲ್ಲ.
ಆದರೆ ಇತ್ತೀಚಿನ ಬೆಳವಣಿಗೆಗಳು ಆತಂಕ ಮೂಡಿಸಿವೆ. ಆ ಬೆಳ್ಳಿಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆಯೇ? ಬಳಸಿದ್ದರೆ ಹೇಗೆ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ. ಅಲ್ಲದೆ ಮಂದಿರಕ್ಕಾಗಿ ನೀಡಲಾದ ದೇಣಿಗೆಯನ್ನು ಬೇರೆ ಉದ್ದೇಶಗಳಿಗೆ ಬಳಸಿದ್ದರೆ, ಭವಿಷ್ಯದಲ್ಲಿ ದೇಣಿಗೆ ನೀಡುವವರ ವಿಶ್ವಾಸಕ್ಕೆ ಧಕ್ಕೆ ಉಂಟಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಣಿಗೆ ನೀಡಿದ ಸಂದರ್ಭದಲ್ಲಿ ಈ 200 ಕೆಜಿ ಬೆಳ್ಳಿಯ ಮೌಲ್ಯ ಸುಮಾರು 1.5 ಕೋಟಿ ರೂ.ಗಳಿಂದ 2 ಕೋಟಿ ರೂ.ವರೆಗೆ ಇತ್ತು. ಪ್ರಸ್ತುತ ಅದರ ಮೌಲ್ಯ ಗಣನೀಯವಾಗಿ ಏರಿಕೆಯಾಗಿದ್ದು, ಸುಮಾರು 6 ಕೋಟಿ ರೂ.ಗಳಿಂದ 7 ಕೋಟಿ ರೂ.ವರೆಗೆ ತಲುಪಿದೆ ಎಂದು ಮನ್ವಾನಿ ತಿಳಿಸಿದ್ದಾರೆ.
ಹೊಣೆಗಾರಿಕೆಗೆ ಆಗ್ರಹ
ಧಾರ್ಮಿಕ ಹಾಗೂ ಸಾರ್ವಜನಿಕ ಉದ್ದೇಶಗಳಿಗಾಗಿ ನೀಡಲಾಗುವ ದೇಣಿಗೆಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕು ದಾನಿಗಳಿಗೆ ಇದೆ ಎಂದು ಮನ್ವಾನಿ ಅಭಿಪ್ರಾಯಪಟ್ಟಿದ್ದು, ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯನ್ನು ಅವರು ಸ್ವಾಗತಿಸಿದ್ದು, ಯಾವುದೇ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
"ದೇಣಿಗೆ ನೀಡಿದ ಜನರಿಗೆ ತಮ್ಮ ಕೊಡುಗೆ ಎಲ್ಲಿಗೆ ಹೋಗಿದೆ ಎಂದು ಕೇಳುವ ಸಂಪೂರ್ಣ ಹಕ್ಕಿದೆ. ಟ್ರಸ್ಟ್ ಅಥವಾ ಅಧಿಕಾರದ ದುರುಪಯೋಗ ನಡೆದಿದ್ದರೆ, ಅದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು," ಎಂದು ಅವರು ಹೇಳಿದ್ದಾರೆ.
ಆಭರಣ ವ್ಯಾಪಾರಿಯಿಂದಲೂ ಪ್ರಶ್ನೆ
ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ, ಲಖನೌ ಮೂಲದ ಆಭರಣ ವ್ಯಾಪಾರಿಯೊಬ್ಬರೂ ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಲಾದ ಬೆಳ್ಳಿ ವಸ್ತುಗಳ ಕುರಿತು ಪ್ರಶ್ನೆ ಎತ್ತಿದ್ದಾರೆ.
ಇಂಡಿಯಾ ಬುಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ (ಐಬಿಜೆಎ) ಉತ್ತರ ಭಾರತ ವಿಭಾಗದ ಮುಖ್ಯಸ್ಥ ಅನುರಾಗ್ ರಸ್ತೋಗಿ ಅವರು, ಮಂದಿರಕ್ಕೆ ನೀಡಲಾಗಿದ್ದ ಮೂರು ಕೆಜಿ ತೂಕದ ಬೆಳ್ಳಿ ದೀಪ ಸೇರಿದಂತೆ ಇತರ ಬೆಳ್ಳಿ ವಸ್ತುಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದಲ್ಲದೆ, 2020ರ ಆಗಸ್ಟ್‌ನಲ್ಲಿ ನಡೆದ ಭೂಮಿ ಪೂಜನ ಸಮಾರಂಭಕ್ಕೂ ಮುನ್ನ ಸಂಘಟನೆಯಿಂದ ದೇಣಿಗೆಯಾಗಿ ನೀಡಲಾಗಿದ್ದ ಸುಮಾರು 39.26 ಕೆಜಿ ತೂಕದ ಬೆಳ್ಳಿ ವಸ್ತುಗಳ ಸುಳಿವೂ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಹೊಸ ಆರೋಪಗಳು ರಾಮ ಮಂದಿರ ಯೋಜನೆಗೆ ನೀಡಲಾದ ದೇಣಿಗೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
Advertisement