

ಭೋಪಾಲ್: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯಕ್ಕೆ 19 ತಿಂಗಳ ಕಂದಮ್ಮನೊಬ್ಬ ತನ್ನ ಎರಡು ಕಣ್ಣುಗಳ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ದಾರುಣ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಸಾಗರ್ ಜಿಲ್ಲೆಯ ಭೂಸಾ ಕಮಲಪುರ ಗ್ರಾಮದ ಇಂದ್ರಜ್ ವಿಶ್ವಕರ್ಮ ಎಂಬುವವರ 19 ತಿಂಗಳ ಗಂಡು ಮಗು ವಿನಯ್‌ಗೆ ಮೇ 29 ರಂದು ತೀವ್ರ ಕೆಮ್ಮು, ನೆಗಡಿಯಾಗಿ, ಕಣ್ಣುಗಳು ಸ್ವಲ್ಪ ಕೆಂಪಾಗಾಗಿದ್ದವು.
ತಕ್ಷಣ ಪೋಷಕರು ಮಗುವನ್ನು ಸಾಗರ್ ಜಿಲ್ಲೆಯ ಬಂದಾ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಮಕ್ಕಳ ವೈದ್ಯರು ಮಗುವನ್ನು ಪರೀಕ್ಷಿಸಿದ ಬಳಿಕ ಮೂಗಿಗೆ ಬಳಸಬೇಕಿದ್ದ ಸಲೈನ್ ಡ್ರಾಪ್ಸ್ ಅನ್ನು ಕಣ್ಣಿಗೆ ಹಾಕಿದ್ದಾರೆ. ಜೊತೆಗೆ ಪ್ಯಾರಾಸಿಟಮಾಲ್ ಸಿರಪ್, ಇಂಜೆಕ್ಷನ್ ಹಾಗೂ ಇತರ ಔಷಧಿಗಳನ್ನು ಕೂಡ ನೀಡಿದ್ದಾರೆ.
ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಹಲವು ಗಂಟೆಗಳ ಕಾಲ ಸಿವಿಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿದರೂ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ವೈದ್ಯರು ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಭೋಪಾಲ್‌ನ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಭೋಪಾಲ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದ ವೇಳೆ, ಮಗುವಿನ ದೃಷ್ಟಿ ಶಾಶ್ವತವಾಗಿ ಕಳೆದುಹೋಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬ ಆರೋಪಿಸಿದೆ.
ತಪ್ಪಾದ ಚಿಕಿತ್ಸೆ ಅಥವಾ ವೈದ್ಯಕೀಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ ಎಂದು ಮಗುವಿನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಬಳಿಕ ಇಂದ್ರಜ್ ವಿಶ್ವಕರ್ಮ ಅವರು ಬಂದಾ ಪೊಲೀಸ್ ಠಾಣೆಯಲ್ಲಿ ವೈದ್ಯರು ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ವೈದ್ಯರ ಹೆಸರು ಗೊತ್ತಿಲ್ಲದಿದ್ದರೂ ಅವರನ್ನು ಗುರುತಿಸಬಲ್ಲೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಆರೋಪಗಳ ಬೆನ್ನಲ್ಲೇ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ (CMHO) ತನಿಖಾ ಸಮಿತಿಯನ್ನು ರಚಿಸಿದ್ದಾರೆ.
ಬ್ಲಾಕ್ ವೈದ್ಯಾಧಿಕಾರಿ ಯೋಗೇಂದ್ರ ಖಟಿಕ್ ಮಾತನಾಡಿ, ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೂವರೆಗೆ ಮಗುವಿನ ಕುಟುಂಬ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಯ ಆಡಳಿತದಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಕುಟುಂಬವು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ತನಿಖಾ ವರದಿ ಬಳಿಕ ವೈದ್ಯಕೀಯ ನಿರ್ಲಕ್ಷ್ಯ ನಡೆದಿದೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಿ ತಿಳಿದುಬರಲಿದೆ.