

ಗದಗ: ಹೆತ್ತ ಮಗುವಿನ ಜೀವವನ್ನು ಪಣಕ್ಕಿಟ್ಟು, ಬೈಕ್‌ನ ಸೈಡ್ ಲಗೇಜ್ ಬಾಕ್ಸ್‌ನಲ್ಲಿ ಕೂರಿಸಿಕೊಂಡು ತಂದೆಯೊಬ್ಬ ಬೇಜವಾಬ್ದಾರಿಯುತವಾಗಿ ಪ್ರಯಾಣಿಸಿದ ಘಟನೆಯೊಂದು ಗದಗದಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸವಾರನೊಬ್ಬ ತನ್ನ ದ್ವಿಚಕ್ರ ವಾಹನದ ಸೈಡ್ ಲಗೇಜ್ ಬ್ಯಾಗ್ (ಸಾಮಾನ್ಯವಾಗಿ ದಾಖಲೆ ಅಥವಾ ದಿನಸಿ ಇಡಲು ಬಳಸುವ ಬಾಕ್ಸ್) ಒಳಗೆ ಪುಟ್ಟ ಮಗುವನ್ನು ಕೂರಿಸಿದ್ದು, ಮಗುವಿನ ಕುತ್ತಿಗೆಯವರೆಗಿನ ಭಾಗ ಬ್ಯಾಗ್ ಒಳಗಿದ್ದು, ತಲೆ ಮಾತ್ರ ಬಾಕ್ಸ್‌ನ ಮೇಲ್ಭಾಗದಿಂದ ಕಾಣಿಸುತ್ತಿದ್ದ ದೃಶ್ಯ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿತ್ತು.
ಈ ಘಟನೆ ಗುರುವಾರ ಟಿಪ್ಪು ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ತೆರಳುವ ಮಾರ್ಗದಲ್ಲಿ ನಡೆದಿದ್ದು, ಭಾರಿ ವಾಹನಗಳು ಸಂಚರಿಸುವ ರಸ್ತೆಯಲ್ಲಿ ಮಗುವನ್ನು ಇಷ್ಟು ಅಪಾಯಕಾರಿಯಾಗಿ ಕರೆದೊಯ್ಯುತ್ತಿರುವುದನ್ನು ಕಂಡು ದಾರಿಹೋಕರು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದರೂ, ಆತ ಅದನ್ನು ಲೆಕ್ಕಿಸದೇ ಪ್ರಯಾಣ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಈ ನಡುವೆ ಸ್ಥಳೀಯರು ಈ ಬೇಜವಾಬ್ದಾರಿತನದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನ ಹುಚ್ಚಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಆಯತಪ್ಪಿದರೂ ಮಗುವಿನ ಜೀವಕ್ಕೆ ಅಪಾಯವಿತ್ತು, ಇಂತಹ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ, ಇದನ್ನು ಗಂಭೀರವಾಗಿ ಪರಿಗಣಿಸಿದ ಗದಗ ಸಂಚಾರಿ ಪೊಲೀಸರು, ದೃಶ್ಯದಲ್ಲಿದ್ದ ಬೈಕ್‌ನ ನೋಂದಣಿ ಸಂಖ್ಯೆಯನ್ನು (Registration Number) ಆಧರಿಸಿ ತನಿಖೆ ಕೈಗೊಂಡು, ಬೈಕ್ ಮಾಲೀಕನನ್ನು ಪತ್ತೆಹಚ್ಚಿ ಸಂಚಾರಿ ಪೊಲೀಸ್ ಠಾಣೆಗೆ ಕರೆಸಿದ್ದಾರೆ.
ವಿಚಾರಣೆ ವೇಳೆ, ಮಾರುಕಟ್ಟೆಗೆ ಹೋಗುವಾಗ ಹಾಗೂ ಹಿಂದಿರುಗುವಾಗ ಮಗುವನ್ನು ಇದೇ ರೀತಿಯಲ್ಲಿ ಕರೆದೊಯ್ಯುತ್ತಿದ್ದೆ ಎಂದು ಆತ ಹೇಳಿದ್ದಾನೆ.
ಆದರೆ ಈ ವಿವರಣೆಯನ್ನು ಪೊಲೀಸರು ಒಪ್ಪದೆ, ಸಂಚಾರ ನಿಯಮ ಉಲ್ಲಂಘನೆ ಹಾಗೂ ಮಗುವಿನ ಜೀವಕ್ಕೆ ಅಪಾಯ ಉಂಟುಮಾಡಿದ ಹಿನ್ನೆಲೆಯಲ್ಲಿ ಭಾರೀ ದಂಡ ವಿಧಿಸಿ, ಇಂತಹ ನಿರ್ಲಕ್ಷ್ಯವನ್ನು ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
"ಸಣ್ಣ ಬ್ರೇಕ್ ಹಾಕಿದರೂ, ವಾಹನ ಸಮತೋಲನ ಕಳೆದುಕೊಂಡರೂ ಅಥವಾ ಅಪಘಾತ ಸಂಭವಿಸಿದರೂ ಮಗುವಿನ ಜೀವಕ್ಕೆ ಗಂಭೀರ ಅಪಾಯ ಉಂಟಾಗುತ್ತಿತ್ತು. ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ," ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಗಿರೀಶ್ ಕಟ್ಟಿ ಪೊಲೀಸ್ ಕ್ರಮವನ್ನು ಸ್ವಾಗತಿಸಿ, "ವಿಡಿಯೋ ನೋಡಿದವರು ಎಲ್ಲರೂ ಆತಂಕಗೊಂಡಿದ್ದರು. ಸಣ್ಣ ತಪ್ಪಿನಿಂದಲೇ ಮಗುವಿನ ಜೀವಕ್ಕೆ ಅಪಾಯವಾಗಬಹುದಿತ್ತು. ದಂಡ ವಿಧಿಸಿ ಎಚ್ಚರಿಕೆ ನೀಡಿರುವುದು ಸರಿಯಾದ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ಸಂಚಾರ ನಿಯಮ ಉಲ್ಲಂಘನೆಯಷ್ಟೇ ಅಲ್ಲ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಗಂಭೀರ ಅಪರಾಧವಾಗಿದೆ. ರಸ್ತೆ ಸುರಕ್ಷತೆ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಇನ್ನೂ ನಿರ್ಲಕ್ಷ್ಯ ತೋರುತ್ತಿರುವುದು ಕಳವಳಕಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ.