

ಮುಂಬೈ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಸ್ರಾಪುರ ಪ್ರಕರಣದ ಅಪರಾಧಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯದ ನಿರ್ಧಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಸ್ವಾಗತಿಸಿದ್ದಾರೆ ಮತ್ತು ಅಂತಹ ಅಪರಾಧಿಗಳಿಗೆ ಸಮಾಜದಲ್ಲಿ ಬದುಕುವ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು "ಅಪರೂಪದಲ್ಲಿ ಅಪರೂಪ" ಎಂದು ಹೇಳಿದ ವಿಶೇಷ ನ್ಯಾಯಾಲಯವು ಸೋಮವಾರ ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಗಾಗಿ 65 ವರ್ಷದ ಭೀಮರಾವ್ ಕಮ್ಲೆಗೆ ಗಲ್ಲು ವಿಧಿಸಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಮೇ 1 ರಂದು ಅಪರಾಧ ನಡೆದ 60 ದಿನಗಳ ಒಳಗೆ, ಜೂನ್ 25 ರಂದು ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ನಸ್ರಾಪುರದಲ್ಲಿ ಚಿಕ್ಕ ಬಾಲಕಿಗೆ ತಿಂಡಿ ನೀಡುವ ಭರವಸೆ ನೀಡಿ, ದನದ ಕೊಟ್ಟಿಗೆಯ ಬಳಿಯ ಶೆಡ್‌ಗೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದನು.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ, ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇನೆ. ತೀರ್ಪು ನ್ಯಾಯದ ಮೇಲಿನ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಪುಣೆ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ್ ಮಿಸಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಪ್ರಕರಣದ ಅಪರಾಧಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಿದ್ದಕ್ಕೆ ಅಭಿನಂದಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ದಾಖಲೆಯ ಕಡಿಮೆ ಸಮಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ವಿಚಾರಣೆಯನ್ನು ನಡೆಸಿ, ಪ್ರಕರಣದ ತ್ವರಿತ ತೀರ್ಪಿಗೆ ಕಾರಣವಾದ ತನಿಖಾ ಸಂಸ್ಥೆಗಳನ್ನು ಫಡ್ನವೀಸ್ ಶ್ಲಾಘಿಸಿದ್ದಾರೆ.