

ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಹೊಸ ಸಂಗತಿ ಹೊರಬಂದಿದೆ. ಇಡೀ ವಿಷಯದಲ್ಲಿ ಈಗ ಹೊಸ ಕಾನೂನು ವಿವಾದ ಉದ್ಭವಿಸಿದೆ. ಏಕೆಂದರೆ ಇಬ್ಬರು ವಕೀಲರು ಆರೋಪಿ ಸಿಯಾ ಗೋಯಲ್ ಪರ ವಕಾಲತ್ತು ವಹಿಸುವುದಾಗಿ ಹೇಳಿಕೊಂಡಿದ್ದಾರೆ. ವಕೀಲರಲ್ಲಿ ಒಬ್ಬರಾದ ಅಶುತೋಷ್ ಶ್ರೀವಾಸ್ತವ ಆರೋಪಿ ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್ ಗೆ 10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದಾರೆ.
ನಾವು ಸಾಹಿಲ್ ಗೋಯಲ್ ಗೆ 10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇವೆ. ಅವರು ಸಂಪೂರ್ಣವಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸುಳ್ಳು ಹೇಳುತ್ತಾ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇವೆ ಎಂದು ಅಶುತೋಷ್ ಶ್ರೀವಾಸ್ತವ ಹೇಳಿದ್ದಾರೆ.
ವಕೀಲ ಅಶುತೋಷ್ ಶ್ರೀವಾಸ್ತವ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಸಿಯಾ ತಮಗೆ ಸಹಿ ಮಾಡಿದ ಅಧಿಕಾರ ಪತ್ರ ನೀಡಿದ್ದಾರೆ ಎಂದು ವಾದಿಸಲು ಮುಂದಾದರು. ಆದರೆ ಮ್ಯಾಜಿಸ್ಟ್ರೇಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಪಿ ಸಿಯಾ ಗೋಯಲ್, ಅಶುತೋಷ್ ಶ್ರೀವಾಸ್ತವ ನನ್ನ ವಕೀಲರಲ್ಲ. ವಿಪುಲ್ ದುಶಿಂಗ್ ನನ್ನನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ನೇರವಾಗಿ ಹೇಳಿದರು.
ಸಿಯಾ ಹೇಳಿಕೆಯ ನಂತರ ಅಶುತೋಷ್ ಶ್ರೀವಾಸ್ತವ ನ್ಯಾಯಾಲಯದಿಂದ ಹೊರನಡೆದರು. ಸಿಯಾ ಕುಟುಂಬದವರು ತಾವು ವಿಪುಲ್ ದುಶಿಂಗ್ ಅವರನ್ನು ಮಾತ್ರ ನೇಮಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಅಶುತೋಷ್ ಶ್ರೀವಾಸ್ತವ ಸಿಯಾ ಕುಟುಂಬಸ್ಥರು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿಲ್ ಗೋಯಲ್‌ಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.