

ಚೆನ್ನೈ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪದೇ ಪದೇ ಎದುರಿಸುತ್ತ "ತಮ್ಮ ವಯಸ್ಸು ವ್ಯರ್ಥ ಮಾಡಿಕೊಳ್ಳುವ" ಬದಲು, ಯುವಕರು ಸಾರ್ವಜನಿಕ ಸೇವೆಗೆ ಪ್ರವೇಶಿಸಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರು ಮಂಗಳವಾರ ಹೇಳಿದ್ದಾರೆ.
ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್‌ಎಡು ಸಮಾವೇಶದ ಎರಡನೇ ದಿನದಂದು ಮಾತನಾಡಿದ ಅಣ್ಣಾಮಲೈ ಅವರು, ಸಾರ್ವಜನಿಕ ಸೇವೆಯಲ್ಲಿ ವ್ಯಾಪಕ ಸುಧಾರಣೆಗಳಿಗೆ ಕರೆ ನೀಡಿದರು.
ದಿನಮಣಿ ಸಂಪಾದಕ ಕೆ ವೈದ್ಯನಾಥನ್ ಅವರು ನಡೆಸುತ್ತಿದ್ದ 'ಸಾರ್ವಜನಿಕ ಸೇವೆಯಲ್ಲಿ ಯುವಕರು: ಸಮರ್ಪಣೆ ಮತ್ತು ಬದ್ಧತೆ' ಕುರಿತ ಚರ್ಚೆಯಲ್ಲಿ ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಅವರೊಂದಿಗೆ ಅಣ್ಣಾಮಲೈ ಮಾತನಾಡುತ್ತಿದ್ದರು.
ಪ್ರತಿವರ್ಷ ಸುಮಾರು 13 ಲಕ್ಷ ಆಕಾಂಕ್ಷಿಗಳು ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಂತಿಮವಾಗಿ ಸುಮಾರು 800 ರಿಂದ 850 ಜನ ಮಾತ್ರ ಅದನ್ನು ಪಾಸ್ ಮಾಡುತ್ತಾರೆ ಎಂದು ಗಮನಿಸಿದ ಅವರು, ಈ ವ್ಯವಸ್ಥೆಯನ್ನು ಸಮರ್ಥ ಅಭ್ಯರ್ಥಿಗಳ ವಿಶಾಲ ಗುಂಪನ್ನು ಬದಿಗಿಡುವ "ಸೋಸುವಿಕೆ ವಿಧಾನ" ಎಂದು ಬಣ್ಣಿಸಿದರು.
ಬದಲಾಗಿ, ಅವರು ಪ್ರತಿಭಾ ಸೇತು ಮಾದರಿಯಲ್ಲಿ ಹೆಚ್ಚು ಆಮೂಲಾಗ್ರ ಉಪಕ್ರಮಗಳನ್ನು ಪ್ರತಿಪಾದಿಸಿದ ಅಣ್ಣಾಮಲೈ, ಇದರ ಅಡಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗಳ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ವಿವರಗಳನ್ನು ಸಂಭಾವ್ಯ ನೇಮಕಾತಿಗಾಗಿ ನೋಂದಾಯಿತ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು ಎಂದರು.
ಸಾರ್ವಜನಿಕ ಸೇವೆಗೆ ಲ್ಯಾಟರಲ್ ಪ್ರವೇಶವನ್ನು ಪುನರುಜ್ಜೀವನಗೊಳಿಸುವಂತೆಯೂ ಅವರು ಕರೆ ನೀಡಿದರು.
“ಖಾಸಗಿ ವಲಯದಲ್ಲಿ ವೃತ್ತಿಜೀವನ ರೂಪಿಸಿಕೊಂಡಿರುವ 40-45 ವರ್ಷ ವಯಸ್ಸಿನವರು ಆಸಕ್ತಿ ಹೊಂದಿದ್ದರೆ ಸಾರ್ವಜನಿಕ ಸೇವೆಗೆ ಪ್ರವೇಶಿಸಲು ಒಂದು ಮಾರ್ಗವಿರಬೇಕು. ಲ್ಯಾಟರಲ್ ಪ್ರವೇಶವನ್ನು ಎರಡು ವರ್ಷಗಳ ಕಾಲ ಜಾರಿಗೆ ತರಲಾಯಿತು. ಆದರೆ ದುರದೃಷ್ಟವಶಾತ್ ಈಗ ಅದು ಸ್ಥಗಿತಗೊಂಡಿದೆ. ನಾವು ಅದನ್ನು ಪುನರಾರಂಭಿಸುತ್ತೇವೆ ಎಂದು ಭಾವಿಸುತ್ತೇನೆ. ಖಾಸಗಿ ವಲಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವವರು ನಂತರ ಸೇವೆ ಸಲ್ಲಿಸಲು ಅವಕಾಶಗಳನ್ನು ಪಡೆಯಬೇಕು” ಎಂದು ಅವರು ಹೇಳಿದರು.
Advertisement