

ಮೊರಾದಾಬಾದ್: ತನ್ನ ಅವಳಿ ಸಹೋದರಿಯನ್ನು 84 ಬಾರಿ ಇರಿದು ಕೊಂದಿದ್ದೂ ಅಲ್ಲದೇ ತಾಯಿಗೆ ಇದೋ ನಿನಗೆ ಸರ್ಪ್ರೈಸ್ ಎಂದು ಹೇಳಿ ವ್ಯಕ್ತಿಯೋರ್ವ ವಿಕೃತಿ ಮೆರೆದಿರುವ ಭೀಭತ್ಸ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಮೊರಾದಾಬಾದ್ ನ ಎಂಜಿನಿಯರ್ ಹಾರ್ದಿಕ್ ಈ ಕುಕೃತ್ಯ ಎಸಗಿರುವ ಆರೋಪಿಯಾಗಿದ್ದು, ಕೆಲಸದ ಸ್ಥಳದಲ್ಲಿ ತನ್ನ ತಾಯಿಯನ್ನು ಭೇಟಿ ಮಾಡಿದ ಹಾರ್ದಿಕ್, "ಮನೆಗೆ ಹೋಗೋಣ. ನಿನಗೊಂದು ಅಚ್ಚರಿ ಇದೆ" ಎಂದು ಹೇಳಿದ್ದಾನೆ. ಆದರೆ ಅದು ಆತನ ತಾಯಿಗೆ ಮಾರಕವಾದ ಅಚ್ಚರಿಯಾಗಿತ್ತು. ಮನೆಗೆ ಬಂದ ಹಾರ್ದಿಕ್‌ನ ತಾಯಿ ನೀಲಿಮಾ ತನ್ನ ಮಗಳು ಹಿಮಶಿಖಾಳನ್ನು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಆಕೆ ಆ ಭೀಭತ್ಸ ದೃಶ್ಯ ಕಂಡು ಕಿರುಚಿದಾಗ, ಹಾರ್ದಿಕ್ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ.
ಕಳೆದ ವಾರ ಈ ಘಟನೆ ನಡೆದಿದ್ದು, ಸಹೋದರರಾದ ಹಾರ್ದಿಕ್ ಮತ್ತು ಹಿಮಶಿಖಾ ನಡುವಿನ ವೃತ್ತಿ ಮತ್ತು ಸಂಬಂಧದ ಬಗ್ಗೆ ಜಗಳ ಮತ್ತು ಭಿನ್ನಾಭಿಪ್ರಾಯ ಉಂಟಾಗಿತ್ತು.
25 ವರ್ಷದ ಹಾರ್ದಿಕ್ ಮತ್ತು ಹಿಮಶಿಖಾ ಇಬ್ಬರೂ ಗುರುಗ್ರಾಮ್‌ನಲ್ಲಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಹಿಮಶಿಖಾ ನೌಕರಿ ಮಾಡುತ್ತಲೇ ಎಂಬಿಎ ಓದುತ್ತಿದ್ದರು. ಮತ್ತೊಂದೆಡೆ, ಹಾರ್ದಿಕ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ನಂತರ ಅವರು ತಮ್ಮ ಕೆಲಸವನ್ನು ತ್ಯಜಿಸಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಪ್ರಾರಂಭಿಸಿದರು.
ಇತ್ತೀಚಿನ ದಿನಗಳಲ್ಲಿ ಹಾರ್ದಿಕ್‌ನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬ ವರದಿ ಮಾಡಿದೆ, ಅವರು ತಡರಾತ್ರಿಯವರೆಗೆ ಮೊಬೈಲ್ ಫೋನ್‌ಗೆ ಅಂಟಿಕೊಂಡಿದ್ದರು, ಆನ್‌ಲೈನ್‌ನಲ್ಲಿ ಹೆಚ್ಚು ಚಾಟ್ ಮಾಡುತ್ತಿದ್ದರು.
ಪೊಲೀಸ್ ತನಿಖೆಯ ಪ್ರಕಾರ, ಹಾರ್ದಿಕ್ ಸಾಮಾಜಿಕ ಮಾಧ್ಯಮದ ಮೂಲಕ ಪುಣೆಯ ಮುಸ್ಲಿಂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಮತ್ತು ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆತನ ಅವಳಿ ಸಹೋದರಿ ಹಿಮಶಿಖಾ ಮತ್ತು ತಾಯಿ ನೀಲಿಮಾ ಆಗಾಗ್ಗೆ ಅವನಿಗೆ ಸಲಹೆ ನೀಡುತ್ತಿದ್ದರು. ಇವೆಲ್ಲವನ್ನೂ ಬಿಟ್ಟು ವೃತ್ತಿಜೀವನದತ್ತ ಗಮನಹರಿಸಬೇಕೆಂದು ಸೂಚಿಸುತ್ತಿದ್ದರು. ಮಾರ್ಚ್ 6 ರ ಸಂಜೆ ಇದೇ ರೀತಿಯ ಚರ್ಚೆ ಭುಗಿಲೆದ್ದಿತು, ಇದು ಶೀಘ್ರದಲ್ಲೇ ಸಹೋದರರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಕೋಪದ ಭರದಲ್ಲಿ, ಹಾರ್ದಿಕ್ ತರಕಾರಿ ಚಾಕುವನ್ನು ಹಿಡಿದು 84 ಬಾರಿ ಇರಿದು ತನ್ನ ಸಹೋದರಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆ ಗಾಯಗಳಿಂದ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಿಮಶಿಖಾಳ ದೇಹದ ಮೇಲೆ 84 ಇರಿತದ ಗಾಯಗಳು ಕಂಡುಬಂದಿವೆ.
ಘಟನೆ ಬೆನ್ನಲ್ಲೇ ಹಾರ್ದಿಕ್ ವಿಮಾ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿದ್ದ ತನ್ನ ತಾಯಿಯನ್ನು ಕೆಲಸದ ಸ್ಥಳದಲ್ಲಿ ಭೇಟಿ ಮಾಡಿ ಮನೆಗೆ ಬಾ ನಿನಗೊಂದು ಸರ್ಪ್ರೈಸ್ ಇದೆ ಎಂದು ಹೇಳಿದ್ದಾನೆ. ಹಾರ್ದಿಕ್ ತನ್ನ ತಾಯಿಯ ಮೇಲೂ ದಾಳಿ ಮಾಡಿದ್ದಾನೆ. ಅವರಿಗೆ ಹಲವು ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನೀಲಿಮಾ ಸ್ಥಿತಿ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್‌ನನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಹಾರ್ದಿಕ್ ತನ್ನ ವೃತ್ತಿಜೀವನದತ್ತ ಗಮನಹರಿಸಲು ಮತ್ತು ತಾನು ಪ್ರೀತಿಸಿದ್ದ ಯುವತಿಯ ಜೊತೆಗಿನ ಪ್ರಣಯ ಸಂಬಂಧಗಳಿಂದ ದೂರವಿರಲು ತಾಯಿ-ಸಹೋದರಿ ನಿರಂತರ ಮನವೊಲಿಕೆ ಮಾಡುತ್ತಿದ್ದುದ್ದರಿಂದ ಆಳವಾಗಿ ಅಸಮಾಧಾನಗೊಂಡಿದ್ದೆ ಎಂದು ಹೇಳಿದ್ದಾನೆ.
Advertisement