

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ವಿದಾಯ ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಖರ್ಗೆ ಅವರು ಟೀಕೆ ಪ್ರಧಾನಿ ಸೇರಿದಂತೆ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿತು.
ಸಂಸತ್ತಿನ ಕಲಾಪಗಳ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ದೇವೇಗೌಡರ ಹೇಳಿಕೆಗಳ ಬಗ್ಗೆ ಖರ್ಗೆ ತಮಾಷೆಯಾಗಿಯೇ ವಾಗ್ದಾಳಿ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ದೇವೇಗೌಡರು ಮತ್ತು ಅವರ ಪಕ್ಷ ಜೆಡಿಎಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಪ್ರೇಮ್ ಹುಮಾರೆ ಸಾಥ್, ಶಾದಿ ಮೋದಿ ಜಿ ಕೆ ಸಾಥ್' (ನಮ್ಮೊಂದಿಗೆ ಪ್ರೀತಿ ಮಾಡಿದರು, ಆದರೆ ಪ್ರಧಾನಿ ಮೋದಿ ಅವರೊಂದಿಗೆ ಮದುವೆಯಾದರು) ಎಂಬ ಹೇಳಿಕೆ ಇಡೀ ಸದನವನ್ನೇ ನಗೆಗಡಲಲ್ಲಿ ತೇಲುವಂತೆ ಮಾಡಿತು.
ನಿರ್ಗಮಿತ ಸದಸ್ಯರಿಗೆ ಬೀಳ್ಕೊಡುಗೆ
ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ವಿದಾಯ ಹೇಳಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸದನದ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳನ್ನು ಪರಿಶೀಲಿಸುವಂತೆ ಕರೆ ನೀಡಿದರು. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲು ಸಾಧ್ಯವಾಗುವಂತೆ ಸದನವು ಹೆಚ್ಚಿನ ಅಧಿವೇಶನಗಳನ್ನು ನಡೆಸಬೇಕು ಎಂದರು.
ಕಾನೂನು ರೂಪಿಸುವಲ್ಲಿ ವಿರೋಧ ಪಕ್ಷದ ಸದಸ್ಯರು ಹೆಚ್ಚಾಗಿ ಭಾಗವಹಿಸಬೇಕು. ಅದಕ್ಕೆ ಯಾವುದೇ ಅಡೆತಡೆ ಉಂಟಾದರೆ ಅದು ಸಂಸತ್ತನ್ನು ದುರ್ಬಲಗೊಳಿಸುತ್ತದೆ ಎಂದ ಅವರು, ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳ ನಿಯಮಿತ ಪರಿಶೀಲನೆ ಅತ್ಯಗತ್ಯ ಎಂಬುದು ನನ್ನ ದೃಢ ನಂಬಿಕೆ. ಈ ವಿಷಯವು ಸದ್ಯ ಸಾಮಾನ್ಯ ಉದ್ದೇಶಗಳ ಸಮಿತಿ (ಜಿಪಿಸಿ) ಮುಂದೆ ಪರಿಗಣನೆಯಲ್ಲಿದೆ ಮತ್ತು ಇದು ಗಂಭೀರವಾದ ಚರ್ಚೆಗೆ ಅರ್ಹವಾಗಿದೆ ಎಂದು ಹೇಳಿದರು.
ರಾಜಕೀಯದಲ್ಲಿ ತೊಡಗಿಸಿಕೊಂಡವರು ಸಾರ್ವಜನಿಕ ಜೀವನದಿಂದ ಎಂದಿಗೂ ನಿವೃತ್ತರಾಗುವುದಿಲ್ಲ ಅಥವಾ ರಾಷ್ಟ್ರ ಸೇವೆ ಮಾಡುವ ಉತ್ಸಾಹದಲ್ಲಿ ಅವರು ಎಂದಿಗೂ ಬತ್ತುವುದಿಲ್ಲ. ರಾಜಕೀಯ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಜನರು ಕಾಲಾನಂತರದಲ್ಲಿ ಬದಲಾಗಬಹುದಾದರೂ, ಸಂಸ್ಥೆಗಳು ಶಾಶ್ವತವಾಗಿರುತ್ತವೆ ಎಂದು ಖರ್ಗೆ ಹೇಳಿದರು.
ಸದನಕ್ಕೆ ಪುನರಾಯ್ಕೆಯಾದ ಸಹೋದ್ಯೋಗಿಗಳಿಗೆ ನಾವು ಆತ್ಮೀಯ ಸ್ವಾಗತ ಕೋರುತ್ತೇವೆ. ನಿವೃತ್ತರಾಗುತ್ತಿರುವ ಮತ್ತು ಈ ಸದನದಿಂದ ನಿರ್ಗಮಿಸುತ್ತಿರುವವರಿಗೆ, ಅವರು ಸಾರ್ವಜನಿಕ ಜೀವನಕ್ಕೆ ಅರ್ಥಪೂರ್ಣ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ಪಡೆದ ಅನುಭವವು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ಇನ್ನಷ್ಟು ಮಹತ್ವದ ಪಾತ್ರಗಳನ್ನು ನಿರ್ವಹಿಸಲು ಅವರಿಗೆ ನೆರವಾಗುತ್ತದೆ' ಎಂದು ವಿರೋಧ ಪಕ್ಷದ ನಾಯಕ ಹೇಳಿದರು.
ಈ ಮೇಲ್ಮನೆಯಲ್ಲಿ ನನ್ನ ಸಮಯವು ಆಹ್ಲಾದಕರ ಮತ್ತು ಸವಾಲಿನಿಂದ ತುಂಬಿದೆ. ಈ ಸದನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ಮಹತ್ವದ ಹೊಸ ಉಪಕ್ರಮಗಳು ಅಗತ್ಯವಿದೆ ಎಂಬುದು ನನ್ನ ದೃಢ ನಂಬಿಕೆ. ಇದರಿಂದ ಮೇಲ್ಮನೆಯು ಸಮಾಜ ಮತ್ತು ರಾಷ್ಟ್ರಕ್ಕೆ ಹೆಚ್ಚು ಸಕಾರಾತ್ಮಕ ಸಂದೇಶವನ್ನು ರವಾನಿಸಬಹುದು ಮತ್ತು ಪರಿಣಾಮಕಾರಿ ಮಾರ್ಗದರ್ಶನವನ್ನು ನೀಡಬಹುದು ಎಂದು ಅವರು ಹೇಳಿದರು.
ಸಂವಿಧಾನವು ಪ್ರತಿಯೊಬ್ಬ ಸಂಸತ್ ಸದಸ್ಯರಿಗೂ ತಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನೀಡಿದೆ. ಚರ್ಚೆಯಿಲ್ಲದೆ, ಯಾವುದೇ ಸಂಸದೀಯ ಸಂಸ್ಥೆಗಳಿಗೆ ನಿಜವಾದ ಮಹತ್ವವಿರುವುದಿಲ್ಲ. ಚಿಂತನಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದರೆ, ಅನೇಕ ಮಾರ್ಗಗಳು ಮುಚ್ಚಲ್ಪಡುತ್ತವೆ. ಉತ್ತಮ ಕಾನೂನು ಜಾರಿಗೆ ಬಂದಾಗ, ಆಡಳಿತ ಪಕ್ಷ ಮಾತ್ರವಲ್ಲ, ವಿರೋಧ ಪಕ್ಷದ ಸಂಸತ್ ಸದಸ್ಯರು ಸಹ ಅದರ ರಚನೆಯಲ್ಲಿ ಸಮಾನ ಪಾತ್ರವನ್ನು ವಹಿಸುತ್ತಾರೆ. ಅವರು ಸಂಸದೀಯ ಸಮಿತಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಪಾತ್ರಗಳಿಗೆ ಯಾವುದೇ ಅಡಚಣೆ ಉಂಟಾದರೆ, ಅದು ಸಂಸದೀಯ ಸಂಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ಸಂಸದರು ಹೇಳಿದರು.
Advertisement