

ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ ತಿಳಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳನ್ನು ನಂಬಬೇಡಿ ಅಥವಾ ಭಯಭೀತರಾಗಿ ಹೆಚ್ಚು ಖರೀದಿಸಲು ಮುಂದಾಗಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿವೆ.
ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) "ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಔಟ್ ಲೆಟ್ ಗಳಲ್ಲಿ ಉತ್ತಮ ಸಂಗ್ರಹ ಇದೆ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
ವದಂತಿಗಳು "ಅನಗತ್ಯ ಭೀತಿ ಉಂಟುಮಾಡಬಹುದು ಮತ್ತು ಸಾಮಾನ್ಯ ಪೂರೈಕೆಗೆ ಅಡ್ಡಿಪಡಿಸಬಹುದು" ಎಂದು ಎಚ್ಚರಿಸಿದ ಐಒಸಿ, ನಾಗರಿಕರು "ಭೀತಿಯಿಂದ ಹೆಚ್ಚು ಖರೀದಿಯನ್ನು ತಪ್ಪಿಸಬೇಕು ಮತ್ತು ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು" ಎಂದು ಒತ್ತಾಯಿಸಿದೆ.
ಇನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಸಹ, ಕೆಲವು ಪ್ರದೇಶಗಳಲ್ಲಿ ಇಂಧನ ಕೊರತೆಯ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದು "ಸಂಪೂರ್ಣ ಆಧಾರರಹಿತ" ಎಂದು ಹೇಳಿದೆ. "ದೇಶದಾದ್ಯಂತ ಯಾವುದೇ ಇಂಧನ ಕೊರತೆಯಿಲ್ಲ" ಎಂದು ಪ್ರತಿಪಾದಿಸಿದೆ.
ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ನ ನಿವ್ವಳ ರಫ್ತುದಾರ ರಾಷ್ಟ್ರವಾಗಿದ್ದು, "ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ನ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ" ಎಂದು ಕಂಪನಿ ಹೇಳಿದೆ. ಪೂರೈಕೆ ಚೈನ್ "ಯಾವುದೇ ಅಡಚಣೆಯಿಲ್ಲದೆ ಸರಾಗವಾಗಿ" ಕಾರ್ಯನಿರ್ವಹಿಸುತ್ತಿವೆ.
"ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆ ಇಲ್ಲ" ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಸಹ ಹೇಳಿದ್ದು, ಸರಬರಾಜು ಸ್ಥಿರವಾಗಿದೆ ಮತ್ತು ಸಾಕಷ್ಟು ಸ್ಟಾಕ್ ಇದೆ ಸ್ಪಷ್ಟಪಡಿಸಿದೆ.
Advertisement