

ನಳಂದಾ: ಜಗತ್ತಿನ ಮುಂದೆ ಬಿಹಾರ ಮತ್ತೆ ಬೆತ್ತಲಾಗಿದ್ದು ಸಾರ್ವಜನಿಕವಾಗಿಯೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಭೀಕರ ಘಟನೆ ವರದಿಯಾಗಿದೆ.
ಬಿಹಾರದ ನಳಂದಾ ಜಿಲ್ಲೆಯಲ್ಲಿ ಈ ಧಾರುಣ ಘಟನೆ ವರದಿಯಾಗಿದ್ದು, ನೂರ್ಸೇರಯ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮೂವರು ದುಷ್ಕರ್ಮಿಗಳು ಸಾರ್ವಜನಿಕವಾಗಿಯೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಧಾರುಣ ಘಟನೆ ವರದಿಯಾಗಿದೆ.
ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಯನ್ನು ರಕ್ಷಿಸಲು ಯತ್ನಿಸಿದರೂ ಅದಕ್ಕೂ ಬಗ್ಗದ ದುಷ್ಕರ್ಮಿಗಳು ಅಲ್ಲಿಂದ ಆಕೆಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ದುಷ್ಕರ್ಮಿಗಳ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಮನೆಗೆ ದಿನಸಿ ತರಲು ಬಂದಿದ್ದ ಮಹಿಳೆ ಮೇಲೆ ದಾಳಿ
ಮೂಲಗಳ ಪ್ರಕಾರ ಮಾರ್ಚ್ 26 ರಂದು, ಸಂಜೆ 6 ರಿಂದ 7 ರ ಸುಮಾರಿಗೆ ಸಂತ್ರಸ್ಥ ಮಹಿಳೆ ಮನೆಗೆ ದಿನಸಿ ತರಲೆಂದು ಕಿರಾಣಿ ಅಂಗಡಿಗೆ ಆಗಮಿಸಿದ್ದರು. ಈ ವೇಳೆ ಆಕೆ ಸರಕುಗಳನ್ನು ಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೂವರು ಗೂಂಡಾಗಳು ಆಕೆಯನ್ನು ಹಿಂಬಾಲಿಸಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಅವರಿಂದ ತಪ್ಪಿಸಿಕೊಂಡು ಜನರಿರುವ ಪ್ರದೇಶಕ್ಕೆ ಓಡಿ ಬಂದಿದ್ದಾಳೆ. ಆದರೂ ಬಿಡದ ಗೂಂಡಾಗಳು ಆಕೆಯನ್ನು ಹಿಂಬಾಲಿಸಿದ್ದಾರೆ.
ಮಹಿಳೆ ಬಟ್ಟೆ ಹರಿದು ಮೃಗೀಯ ವರ್ತನೆ
ಇತ್ತ ಜನರಿರುವ ಪ್ರದೇಶಕ್ಕೆ ಮಹಿಳೆ ಓಡಿ ಬಂದರೂ ಬಿಡದ ಗೂಂಡಾಗಳು ಆಕೆಯನ್ನು ಹಿಡಿದು ಮೃಗೀಯ ವರ್ತನೆ ತೋರಿದ್ದಾರೆ. ಆಕೆಯ ಬಟ್ಟೆ ಹರಿದು ಆಕೆಯನ್ನು ಅಸಭ್ಯವಾಗಿ ಮುಟ್ಟಿ ಎಳೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೂಗಿಕೊಂಡಾಗ ಸ್ಥಳೀಯರು ದೌಡಾಯಿಸಿದ್ದು ಆರಂಭದಲ್ಲಿ ಏನಾಗುತ್ತಿದೆ ಎಂಬುದು ಜನರಿಗೂ ತಿಳಿಯಲಿಲ್ಲ. ಕೌಟುಂಬಿಕ ಕಲಹ ಎಂದು ನೋಡುತ್ತಾ ಸುಮ್ಮನಿದ್ದರು.
ಆದರೆ ಮಹಿಳೆ ಕೂಗಾಟ ಹೆಚ್ಚಾದಾಗ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಯಾವುದಕ್ಕೂ ಹೆದರದ ಗೂಂಡಾಗಳು ಅಲ್ಲಿಯೇ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸಾರ್ವಜನಿಕರು ಮಧ್ಯ ಪ್ರವೇಶಿಸುತ್ತಲೇ ಆಕೆಯನ್ನು ಅಲ್ಲಿಂದ ಎಳೆದೊಯ್ಯಲು ಯತ್ನಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ ಎನ್ನುವಾಗಲೇ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸ್ ದೂರು ದಾಖಲು, ಇಬ್ಬರ ಬಂಧನ, ಓರ್ವ ಪರಾರಿ
ಇನ್ನು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ದೌಡಾಯಿಸಿದ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದಿದ್ದಾರೆ. ಸಂತ್ರಸ್ತೆಯ ಹೇಳಿಕೆ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಮೂವರು ಆರೋಪಿಗಳ ಪೈಕಿ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ದುಷ್ಕರ್ಮಿಗಳನ್ನು ಅಶೋಕ್ ಯಾದವ್, ಮಾಟ್ರು ಮಹ್ತೋ ಮತ್ತು ರವಿಕಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಮಟ್ರು ಮಹತೋ ಮತ್ತು ಅಶೋಕ್ ಯಾದವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರವಿಕಾಂತ್ ಪರಾರಿಯಾಗಿದ್ದು. ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವ್ಯಾಪಕ ಆಕ್ರೋಶ
ಇನ್ನು ಮಹಿಳೆ ಮೇಲಿನ ಈ ದಾಳಿ ಬಿಹಾರದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕವಾಗಿಯೇ ಮಹಿಳೆ ಮೇಲೆ ಈ ರೀತಿ ದಾಳಿ ನಡೆದಿದ್ದು, ಪೊಲೀಸರು ಮತ್ತು ಸರ್ಕಾರ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
Advertisement