

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ ಪ್ರವಾಸಿ ಬೋಟ್‌ನಲ್ಲಿದ್ದ ಇನ್ನೂ ಐವರ ಮೃತದೇಹಗಳನ್ನು ಶುಕ್ರವಾರ(ಮೇ 1) ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದು, ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.
ಗುರುವಾರ ಸಂಜೆ ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಅದು ಹಠಾತ್ ಬಿರುಗಾಳಿಗೆ ಸಿಲುಕಿ, ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತವಾದ ತಕ್ಷಣವೇ ನಾಲ್ಕು ಜನರ ಮೃತದೇಹ ಸಿಕ್ಕಿತ್ತು, ಇದೀಗ ಐದು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಇದುವರೆಗೆ 28 ಜನರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೋಣಿ ಉರುಳಿ ಬಿದ್ದ ಪರಿಣಾಮ ತಾಯಿ ಮತ್ತು ಅವರ ನಾಲ್ಕು ವರ್ಷದ ಮಗ ಗುರುವಾರ ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡವು ಇಂದು ಬೆಳಿಗ್ಗೆ ಅವರ ಶವಗಳನ್ನು ಪತ್ತೆಹಚ್ಚಿದೆ, ಮಗುವನ್ನು ಉಳಿಸುವ ಹತಾಶ ಪ್ರಯತ್ನದಲ್ಲಿ ತಾಯಿ ಮಗುವನ್ನು ಎದೆಗೆ ಹಿಡಿದುಕೊಂಡಿದ್ದರು. ಶವಗಳನ್ನು ಬೇರ್ಪಡಿಸಲು ತುಂಬಾ ಕಷ್ಚವಾಯಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಹವಾಮಾನ ಹಠಾತ್ತನೆ ಹದಗೆಟ್ಟು ಬಲವಾದ ಬಿರುಗಾಳಿ ಬೀಸಿದಾಗ ತನ್ನ ಹೆಂಡತಿ, ಅತ್ತೆ ಮತ್ತು ಮೊಮ್ಮಗ ಕಣ್ಣು ಮಿಟುಕಿಸುವಷ್ಟರಲ್ಲಿ ಕಣ್ಮರೆಯಾದರು" ಎಂದು ಮತ್ತೊಬ್ಬ ವ್ಯಕ್ತಿ ತಿಳಿಸಿದರು. ಏನಾಗುತ್ತಿದೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಕಿರುಚಾಡುತ್ತಿದ್ದರು. ದೋಣಿ ಮುಳುಗುತ್ತಿತ್ತು ಮತ್ತು ಜನರು ಸಹಾಯಕ್ಕಾಗಿ ಅಳುತ್ತಿದ್ದರು" ಎಂದು ಅವರು ಹೇಳಿದರು.
ರಕ್ಷಣಾ ಕಾರ್ಯಾಚರಣೆಯ ನಂತರ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಾಣೆಯಾದ ಪ್ರಯಾಣಿಕರಿಗಾಗಿ ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. ಹೈಡ್ರಾಲಿಕ್ ಕ್ರೇನ್‌ಗಳನ್ನು ಬಳಸಿಕೊಂಡು ಬೋಟ್ ಅನ್ನು ಜಲಮೂಲದಿಂದ ಹೊರತಗೆಯಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಅಪಘಾತದಿಂದ ರಕ್ಷಿಸಲ್ಪಟ್ಟ ದೆಹಲಿ ನಿವಾಸಿ ಸಂಗೀತಾ ಕೋರಿ ಮಾತನಾಡಿ, ತಾನು ಮತ್ತು ತನ್ನ ಕುಟುಂಬವು ಅಣೆಕಟ್ಟಿಗೆ ಸ್ವಯಂಪ್ರೇರಿತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ಹಡಗಿನಲ್ಲಿ ಸುರಕ್ಷತಾ ಕ್ರಮಗಳು ಅಸಮರ್ಪಕವಾಗಿದ್ದವು ಮತ್ತು ಪರಿಸ್ಥಿತಿಗಳು ಹದಗೆಟ್ಟಂತೆ ಭಯಭೀತರಾದರು ಎಂದು ಅವರು ಆರೋಪಿಸಿದ್ದಾರೆ.
ಆ ಸಮಯದಲ್ಲಿ ಪ್ರಯಾಣಿಕರು ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಮತ್ತು ದೋಣಿಯೊಳಗೆ ನೀರು ಪ್ರವೇಶಿಸಲು ಪ್ರಾರಂಭಿಸಿದ ನಂತರವೇ ಅವುಗಳನ್ನು ವಿತರಿಸಲಾಯಿತು, ಇದು ಅವ್ಯವಸ್ಥೆಗೆ ಕಾರಣವಾಯಿತು ಎಂದು ಕೋರಿ ತಿಳಿಸಿದ್ದಾರೆ. ಟಿಕೆಟ್ ಇಲ್ಲದ ಮಕ್ಕಳು ಸೇರಿದಂತೆ ಹಡಗು ಅನುಮತಿಸಲಾದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಆರೋಪಿಸಿದರು.
Advertisement