

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಟಿಎಂಸಿ ನಾಯಕರ ಪ್ರತಿಭಟನೆಗಳ ನಡುವೆಯಲ್ಲಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರವಾಲ್ “ಸ್ಟ್ರಾಂಗ್‌ರೂಮ್‌ಗಳಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಟ್ರಾಂಗ್‌ರೂಮ್‌ಗಳ ನೇರ ಪ್ರಸಾರ ದೃಶ್ಯಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಏಳು ಇವಿಎಂಗಳನ್ನು ಹೊಂದಿರುವ ಹಾಗೂ ಒಂದು ಅಂಚೆ ಮತಪತ್ರಗಳಿಗಾಗಿ ಇರುವ ಒಟ್ಟು ಎಂಟು ಸ್ಟ್ರಾಂಗ್‌ರೂಮ್‌ಗಳ ನೇರ ದೃಶ್ಯ ಪ್ರಸಾರ ನಿರಂತರವಾಗಿ ನಡೆಯುತ್ತಿದ್ದು, ಮೂರು ಹಂತದ ಭದ್ರತಾ ವಲಯದ ಹೊರಗಿನಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅವನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು ಎಂದು ಅವರು ಹೇಳಿದರು.
ಸಾಯಂಕಾಲ 4 ಗಂಟೆ ಸುಮಾರಿಗೆ ಕಂಡ ಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ನಿಯಮಾನುಸಾರ ಅಂಚೆ ಮತಪತ್ರಗಳ ಸ್ಟ್ರಾಂಗ್‌ರೂಮ್ ತೆರೆಯಲಾಗಿತ್ತು ಎಂದು ಅಗರವಾಲ್ ವಿವರಿಸಿದರು. ಈ ಕುರಿತು ರಿಟರ್ನಿಂಗ್ ಅಧಿಕಾರಿ ಮುಂಚಿತವಾಗಿ ಎಲ್ಲಾ ಅಭ್ಯರ್ಥಿಗಳು ಹಾಗೂ ಪಕ್ಷಗಳಿಗೆ ಮಾಹಿತಿ ನೀಡಿದ್ದರು. ನಿಯಮಗಳ ಪ್ರಕಾರ ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಅವರು ಹೇಳಿದರು.
ಟಿಎಂಸಿ ನಾಯಕರು ಅಲ್ಲಿ ಬರಬೇಕಾಗಿತ್ತು. ಸಂಜೆ 4 ಗಂಟೆಯ ನಂತರ ಮೂವರು ಅಭ್ಯರ್ಥಿಗಳು ಬಂದು ಇವಿಎಂ ಸ್ಟ್ರಾಂಗ್‌ರೂಮ್‌ಗಳು ಸೀಲ್ಡ್ ಆಗಿದ್ದು, ಅಂಚೆ ಮತಪತ್ರಗಳ ಕೊಠಡಿ ತೆರೆಯಲ್ಪಟ್ಟಿರುವುದನ್ನು ನೋಡಿದರು. ನಂತರ ಅವರು ತೆರಳಿದರು ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ, ಮತ ಎಣಿಕೆ ಶೇಕಡಾ 100ರಷ್ಟು ಸ್ವಚ್ಛ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಯಲಿದೆ ಎಂದು ಕೂಡ ಅವರು ಹೇಳಿದರು.
ನಿನ್ನೆ ಗುರುವಾರ ತಡರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪಶ್ಚಿಮ ಬಂಗಾಳ ಸಿಇಒ, ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ ಪ್ರಕ್ರಿಯೆಗಳು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತವೆ ಎಂದು ತಿಳಿಸಿದರು.
ಈ ಹೇಳಿಕೆ, ಚುನಾವಣಾ ಆಯೋಗದ ಅಧಿಕಾರಿಗಳ ಸಮ್ಮುಖದಲ್ಲಿ ಬಿಜೆಪಿ, ಸಂಬಂಧಿತ ಪಕ್ಷಗಳ ಪ್ರತಿನಿಧಿಗಳಿಲ್ಲದೇ ಮತಪೆಟ್ಟಿಗೆಗಳನ್ನು ತೆರೆಯಲು ಯತ್ನಿಸಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಟಿಎಂಸಿ ನಾಯಕರು ಶಶಿ ಪಾಂಜಾ ಮತ್ತು ಕುನಾಲ್ ಘೋಷ್ ಅವರು ಕೊಲ್ಕತ್ತಾದ ನೇತಾಜಿ ಒಳಾಂಗಣ ಸ್ಟೇಡಿಯಂ ಹೊರಗಿನ ಸ್ಟ್ರಾಂಗ್‌ರೂಮ್ ಎದುರು ಧರಣಿ ನಡೆಸಿದರು.
ತಮ್ಮ ಆರೋಪಗಳಿಗೆ ಬೆಂಬಲವಾಗಿ, ಟಿಎಂಸಿ ಪಕ್ಷವು ಕೋಲ್ಕತ್ತಾದ ಒಂದು ಸ್ಟ್ರಾಂಗ್‌ರೂಮ್ ಒಳಗಿನ ಸಿಸಿಟಿವಿ ದೃಶ್ಯ ಎಂದು ಹೇಳಲಾಗಿರುವ ವಿಡಿಯೋವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಆ ದೃಶ್ಯವು ಬಿಜೆಪಿ ಮತ್ತು ಚುನಾವಣಾ ಆಯೋಗದ ಸಹಭಾಗಿತ್ವದಲ್ಲಿ, ಸಂಬಂಧಿತ ಪಕ್ಷಗಳ ಪ್ರತಿನಿಧಿಗಳಿಲ್ಲದೇ ಮತಪೆಟ್ಟಿಗೆಗಳನ್ನು ತೆರೆಯಲಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ಪಕ್ಷವು ಆರೋಪಿಸಿದೆ.
Advertisement