

ರಾಜನಂದಗಾಂವ್: ಛತ್ತೀಸ್‌ಗಢದ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಫೂಲ್‌ಬಸನ್ ಬಾಯಿ ಯಾದವ್ ಅವರ ಅಪಹರಣಕ್ಕೆ ಯತ್ನ ನಡೆದಿದೆ.
ಫೂಲ್‌ಬಸನ್ ಬಾಯಿ ಯಾದವ್ 'ಮಾ ಬಾಮಲೇಶ್ವರಿ ಜನಹಿತ್ ಕರೇ ಸಮಿತಿ'ಯ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ, ಸ್ವಸಹಾಯ ಗುಂಪುಗಳ ರಚನೆ ಮತ್ತು ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದು, 8 ಲಕ್ಷಕ್ಕೂ ಹೆಚ್ಚು ಮಹಿಳೆಯರ ಜೀವನದಲ್ಲಿ ಧನಾತ್ಮಕ ಬದಲಾವಣೆ ತಂದಿದ್ದಾರೆ.
ಇಂದು ಬೆಳಗ್ಗೆ ರಾಜನಂದಗಾಂವ್ ಜಿಲ್ಲೆಯಲ್ಲಿ ಅವರ ಅಪಹರಣಕ್ಕೆ ಯತ್ನ ನಡೆದಿದ್ದು, ಪೊಲೀಸರು ರಕ್ಷಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ರಕ್ಷಿಸಿದ್ದು ಹೇಗೆ?
ಬೆಮೆತಾರಾ ಮೂಲದ ಖುಷ್ಬು ಸಾಹು ಎಂಬವರು ಬೆಳಿಗ್ಗೆ 10.30 ರ ಸುಮಾರಿಗೆ ಯಾದವ್ ಅವರನ್ನು ಭೇಟಿ ಮಾಡಿದ್ದು, ಹೊರಗೆ ಕಾರಿನಲ್ಲಿ ಕುಳಿತಿರುವ ವಿಕಲ ಚೇತನ ಮಹಿಳೆಯೊಬ್ಬರು ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದಾರೆಂದು ಹೇಳಿದ್ದಾರೆ. ಬಳಿಕ ಯಾದವ್ ಹೊರಗೆ ನಡೆದು ಕಾರು ಹತ್ತಿದಾಗ, ಅದು ವೇಗವಾಗಿ ಹೋಗಿದ್ದು, ಆರೋಪಿಗಳು ಆಕೆಯ ಕೈಗಳನ್ನು ಕಟ್ಟಿ ಬಟ್ಟೆಯಿಂದ ಬಾಯಿ ಮುಚ್ಚಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್ ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರು ರಾಜನಂದಗಾಂವ್-ಖೈರಾಗರ್ ರಸ್ತೆಯ ಚಿಖ್ಲಿ ಪೊಲೀಸ್ ಔಟ್‌ಪೋಸ್ಟ್ ಬಳಿ ಕಾರನ್ನು ನಿಲ್ಲಿಸಿದ್ದಾರೆ.
ಕೈಗಳನ್ನು ಕಟ್ಟಿ ಬಾಯಿ ಕಟ್ಟಿದ ಮಹಿಳೆ ಮೂರ್ಛೆ ರೋಗಿ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಸಿಬ್ಬಂದಿಗಳಲ್ಲಿ ಒಬ್ಬರು ಯಾದವ್ ಅವರನ್ನು ಗುರುತಿಸಿ ಅವರನ್ನು ರಕ್ಷಿಸಿದ್ದಾರೆ. ಸಾಹು, ಮತ್ತೊಬ್ಬ ಮಹಿಳೆ ಮತ್ತು ಪುರುಷ ಕಾರು ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಸುಕುಲ್ದೈಹಾನ್ ಪೊಲೀಸ್ ಹೊರಠಾಣೆಗೆ ಕರೆದೊಯ್ಯಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜನಂದಗಾಂವ್ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಅಲೆಕ್ಸಾಂಡರ್ ಕಿರೊ ತಿಳಿಸಿದ್ದಾರೆ.
ಸ್ವಸಹಾಯ ಗುಂಪುಗಳ ಚಟುವಟಿಕೆಗಳ ತನಿಖೆ: ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಸಾಹು ಸ್ವಸಹಾಯ ಗುಂಪು (SHG) ನೊಂದಿಗೆ ಸಂಬಂಧ ಹೊಂದಿದ್ದು, ಕಳೆದ ನಾಲ್ಕು ತಿಂಗಳಿನಿಂದ ಯಾದವ್ ಜೊತೆ ಸಂಪರ್ಕದಲ್ಲಿದ್ದ. ಬೆಮೆತಾರಾ ಪ್ರದೇಶದಲ್ಲಿ ಉದ್ಯೋಗ ತರಬೇತಿಯ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ನಡೆಸುತ್ತಿದ್ದ . ಅಲ್ಲದೇ ಅಕ್ರಮವಾಗಿ ಹಣವನ್ನು ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. ಅಪಹರಣದ ಹಿಂದಿನ ಉದ್ದೇಶವು ಹೆಚ್ಚಿನ ತನಿಖೆಯ ನಂತರ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಸ್ವಸಹಾಯ ಗುಂಪು ಸಬಲೀಕರಣದಲ್ಲಿನ ತನ್ನ ಕೆಲಸಕ್ಕಾಗಿ ಫೂಲ್ಬಸನ್ ಬಾಯಿ ಯಾದವ್ 2012 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. 2001 ರಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಲು ಪ್ರಾರಂಭಿಸಿದ ಯಾದವ್, ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣ ಪ್ರಮಾಣದ ಹಣವನ್ನು ಉಳಿಸುವ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಈಗ ಅವರ ಸಂಘಗಳು ಸುಮಾರು ಎರಡು ಲಕ್ಷ ಮಹಿಳೆಯರನ್ನು ಒಳಗೊಂಡಿದೆ. ಅವರು ಸಾಮಾಜಿಕ ಸೇವೆ ಮತ್ತು ಮಹಿಳೆಯರ ಸಬಲೀಕರಣ ಜೊತೆಗೆ ನೀರು ಮತ್ತು ಪರಿಸರ ಸಂರಕ್ಷಣೆ ಮತ್ತು ಸಾವಯವ ಕೃಷಿಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನಿತರ ಹಲವಾರು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ.
Advertisement