

ತಮಿಳು ನಾಡು ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆ
ದ್ರಾವಿಡ ಮುನ್ನೇತ್ರ ಕಳಗಂ (DMK) ಕಾಂಗ್ರೆಸ್ ನ್ನು ಬೆನ್ನಿಗೆ ಚೂರಿಗೆ ಹಾಕಿದ ಪಕ್ಷ ಎಂದು ಆರೋಪಿಸಿದೆ. ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚನೆಗೆ ಬೆಂಬಲ ನೀಡಿದ ಕಾಂಗ್ರೆಸ್ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಈ ನಿರ್ಧಾರಕ್ಕೆ ಕಾಂಗ್ರೆಸ್ ಹಿಂದಿನಿಂದ ದ್ರೋಹ ಎಸಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನ ಈ ನಿರ್ಧಾರ ತಕ್ಷಣದ ಒಳಿತಿಗೆ ಮಾತ್ರವಾದದ್ದು. 2029ರ ಲೋಕಸಭೆ ಮಹತ್ವದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಲು ನಾವು ಆತ್ಮವಿಶ್ವಾಸದಲ್ಲಿದ್ದೆವು. ಆದರೆ ಕಾಂಗ್ರೆಸ್‌ನ ಈ ಕ್ರಮದಿಂದ ಅದು ಸ್ಥಿರವಲ್ಲದ ಮೈತ್ರಿ ಪಾಲುದಾರವಾಗಿ ಪರಿಣಮಿಸಿದೆ. ದೇಶದಾದ್ಯಂತ ಕಾಂಗ್ರೆಸ್ ಮೇಲೆ ಜನರು ವಿಶ್ವಾಸ ಇರಲಾರದು ಎಂಬ ಭಾವನೆ ಮೂಡುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಈ ಹೆಜ್ಜೆ ಮೈತ್ರಿ ಪಕ್ಷಗಳಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅಣ್ಣಾದುರೈ ಹೇಳಿದರು. “ಟಿವಿಕೆಗೆ ಬೆಂಬಲ ನೀಡಲು ಅವರು ನೀಡಿದ ಕಾರಣಗಳು ಸಮರ್ಥನೀಯವಾಗಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನ್ನು ದೂರವಿಡಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ ಇದು ಸಂಪೂರ್ಣವಾಗಿ ಕಾಂಗ್ರೆಸ್‌ನ ಸ್ವತಂತ್ರ ನಿರ್ಧಾರ. ಫಲಿತಾಂಶ ಹೊರಬಂದ ತಕ್ಷಣವೇ ಜನಮತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಮೊದಲಾದವರ ಮನಸ್ಸಿನಲ್ಲಿ ಯಾವ ಪರಿಣಾಮ ಬೀರಬಹುದು ಎಂದು ಪ್ರಶ್ನಿಸಿದರು. ನಾವು ಎಂದಿಗೂ ಕಾಂಗ್ರೆಸ್‌ನ್ನು ಸೋಲಿಸಿಲ್ಲ, ಅದಕ್ಕೆ ಅನ್ಯಾಯ ಮಾಡಿರಲಿಲ್ಲ ಎಂದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಬಹುಮತಕ್ಕಿಂತ 10 ಸ್ಥಾನಗಳು ಕಡಿಮೆಯಾದ ಹಿನ್ನೆಲೆಯಲ್ಲಿ, ಸರ್ಕಾರ ರಚನೆಗೆ ಕಾಂಗ್ರೆಸ್ ಏಕಮತದಿಂದ ಬೆಂಬಲ ನೀಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರಳ ಬಹುಮತಕ್ಕೆ ಇನ್ನೂ 10 ಶಾಸಕರ ಬೆಂಬಲ ಅಗತ್ಯವಿದೆ. ಕಾಂಗ್ರೆಸ್ 5 ಸ್ಥಾನಗಳನ್ನು, ಪಟ್ಟಾಳಿ ಮಕ್ಕಳ್ ಕಚ್ಚಿ 4 ಸ್ಥಾನಗಳನ್ನು ಗೆದ್ದಿವೆ. ಸಿಪಿಐ ಮತ್ತು ಸಿಪಿಎಂ ತಲಾ 2 ಸ್ಥಾನಗಳನ್ನು ಪಡೆದಿವೆ. ಆಡಳಿತದಲ್ಲಿದ್ದ ಡಿಎಂಕೆ 59 ಸ್ಥಾನಗಳನ್ನು, ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿವೆ.
ಭಾರತೀಯ ಜನತಾ ಪಕ್ಷ, ದೇಶೀಯ ಮುರಪೊಕ್ಕು ದ್ರಾವಿಡ ಕಳಗಂ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ತಲಾ ಒಂದು ಸ್ಥಾನವನ್ನು ಪಡೆದಿದ್ದು, ವಿಸಿಕೆ 2 ಸ್ಥಾನಗಳನ್ನು ಗೆದ್ದಿದೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ಎಐಎಡಿಎಂಕೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
Advertisement