

ಪಾಟ್ನಾ: ಜೆಡಿಯು ಅಧ್ಯಕ್ಷ, ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಸೇರಿದಂತೆ NDAನ 32 ನಾಯಕರು ಗುರುವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯಿಂದ 15 ನಾಯಕರು, ಜೆಡಿ(ಯು)ನಿಂದ 13, ಎಲ್‌ಜೆಪಿ(ಆರ್‌ವಿ)ಯಿಂದ ಇಬ್ಬರು ಮತ್ತು ಎಚ್‌ಎಎಂ ಮತ್ತು ಆರ್‌ಎಲ್‌ಎಂನಿಂದ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸಂಪುಟಕ್ಕೆ ಐದು ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ.
ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ, ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಎನ್ ಡಿಎನ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು.
ಎರಡು ತಿಂಗಳ ಹಿಂದೆಯೇ ಜೆಡಿಯು ಸೇರಿದ 45 ವರ್ಷದ ನಾಯಕ ನಿಶಾಂತ್ ಅವರು ಪಕ್ಷದ ಹಿರಿಯ ಕಾರ್ಯಕರ್ತರ ಮನವೊಲಿಕೆಗೆ ಮಣಿದು, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಂಪುಟ ಸೇರಲು ಒಪ್ಪಿಕೊಂಡಿದ್ದಾರೆ.
"ನಿಶಾಂತ್ ಅವರು ಪಕ್ಷಕ್ಕೆ ಸೇರಿದಾಗಿನಿಂದ, ಅವರು ಸರ್ಕಾರ ಸೇರಬೇಕೆಂಬುದು ಕಾರ್ಯಕರ್ತರ ಆಶಯವಾಗಿತ್ತು. ಕಳೆದ ತಿಂಗಳು ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬಹುದಿತ್ತು. ಆದರೆ ಅವರು ಹಿಂಜರಿಯುತ್ತಿದ್ದರು. ಅಂತಿಮವಾಗಿ, ಅವರು ಒಪ್ಪಿಕೊಂಡಿದ್ದಾರೆ" ಎಂದು ಮೂಲಗಳು ಬುಧವಾರ ಪಿಟಿಐಗೆ ತಿಳಿಸಿವೆ.
Advertisement