

ಚೆನ್ನೈ: ತಮಿಳುನಾಡಿನಲ್ಲಿ ಬಹುಮತದ ಕೊರತೆ ಎದುರಿಸುತ್ತಿದ್ದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ಕೊನೆಗೂ ಮ್ಯಾಜಿಕ್ ನಂಬರ್ ಸಿಕ್ಕಿದ್ದು, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಶುಕ್ರವಾರ ಸಂಜೆ ನೂತನ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್ವಾದಿ(ಸಿಪಿಐಎಂ) ನಾಯಕ ಕೆ. ಬಾಲಕೃಷ್ಣನ್ ಅವರು ಹೇಳಿದ್ದಾರೆ.
"ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಆಹ್ವಾನ ಮತ್ತು ಇತರ ವಿಷಯಗಳನ್ನು ಕಳುಹಿಸಲಾಗುವುದು. ನಾವು ಬೆಂಬಲ ಪತ್ರವನ್ನು ವಿಜಯ್ ಗೆ ನೀಡಿದ್ದೇವೆ. ಅವರು(ಟಿವಿಕೆ ಮುಖ್ಯಸ್ಥ ವಿಜಯ್) ರಾಜ್ಯಪಾಲರ ಬಳಿಗೆ ಹೋಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರು ಸರ್ಕಾರ ರಚಿಸುವಂತೆ ವಿಜಯ್ ಅವರಿಗೆ ಸೂಚಿಸಿದ್ದಾರೆ. ಅದರ ನಂತರ, ಅವರು ನಮ್ಮ ಕಚೇರಿಗೆ ಬಂದು ನಾವು ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದರು" ಎಂದು ಸಿಪಿಎಂ ನಾಯಕ ತಿಳಿಸಿದ್ದಾರೆ.
ರಾಹುಲ್ ಗಾಂಧಿ, ಖರ್ಗೆ ಭಾಗಿ ಸಾಧ್ಯತೆ
ದಳಪತಿ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನಿಸಲಾಗಿದ್ದು, ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ ಕಂಡೀಷನಲ್ ಬೆಂಬಲ ನೀಡಿದೆ. ಇದೀಗ ಸಿಪಿಐ, ಸಿಪಿಎಂ ಹಾಗೂ ವಿಸಿಕೆ ಕೂಡ ಬೆಂಬಲ ಘೋಷಿಸಿದ್ದು, ವಿಜಯ್ ಸುಲಭವಾಗಿ ಮ್ಯಾಜಿಕ್ ನಂಬರ್ ದಾಟಿದಂತಾಗಿದೆ.
ಟಿವಿಕೆ ಒಟ್ಟು 107, ಸಿಪಿಐ, 2 ಸಿಪಿಎಂ, 2 ವಿಸಿಕೆ, 2 ಕಾಂಗ್ರೆಸ್ 5 ಐದು ಸೇರಿ 118 ಆಗಲಿದೆ.
Advertisement