

ಕೋಲ್ಕತಾ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶನಿವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪಶ್ಚಿಮ ಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಸೋನಾರ್ ಬಾಂಗ್ಲಾ ಯುಗ ಅಧಿಕೃತ ಆರಂಭ ಎಂದು ಹೇಳಿದ್ದಾರೆ.
ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್‌ಎನ್ ರವಿ ಅವರು ಬಿಜೆಪಿಯ ಸುವೇಂದು ಅಧಿಕಾರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಯುಗಕ್ಕೆ ಚಾಲನೆ ನೀಡಿದಂತಾಗಿದೆ.
ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಗಣ್ಯ ರಾಜಕೀಯ ನಾಯರು ಉಪಸ್ಥಿತರಿದ್ದರು.
ಪ್ರಮಾಣ ವಚನಕ್ಕೂ ಮುನ್ನ ಮಾತನಾಡಿದ ಸುವೇಂದು ಅಧಿಕಾರಿ ಈ ಸಂದರ್ಭವನ್ನು “ನಮ್ಮ ಸಂಸ್ಥಾಪಕ ಪಿತೃಗಳ ಕನಸುಗಳ ಸಾಕಾರ” ಎಂದು ವರ್ಣಿಸಿದರು. ರಾಜ್ಯವು ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಕಾಣುತ್ತಿರುವ ಹಿನ್ನೆಲೆ, ಇದೊಂದು ಐತಿಹಾಸಿಕ ಕ್ಷಣ ಎಂದು ಅವರು ಹೇಳಿದರು.
'ಪಶ್ಚಿಮ ಬಂಗಾಳಕ್ಕೆ ಇದು ನಿಜಕ್ಕೂ ಐತಿಹಾಸಿಕ ಪ್ರಭಾತ. ದೂರದೃಷ್ಟಿಯ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರನ್ನು ‘ಸಿಟಿ ಆಫ್ ಜಾಯ್’ಗೆ ಸ್ವಾಗತಿಸುವುದು ಅಪಾರ ಹೆಮ್ಮೆ ಮತ್ತು ಸಂಭ್ರಮದ ಕ್ಷಣವಾಗಿದೆ.
ಇಂದು ಸ್ವಾತಂತ್ರ್ಯಾನಂತರ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರದ ಪ್ರಮಾಣವಚನ ಸಮಾರಂಭವನ್ನು ನಾವು ಕಾಣುತ್ತಿರುವಾಗ, ನಮ್ಮ ಸಂಸ್ಥಾಪಕ ಪಿತೃಗಳ ಕನಸುಗಳನ್ನು ಸಾಕಾರಗೊಳಿಸುತ್ತಿದ್ದೇವೆ,” ಎಂದು ಸುವೇಂದು ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಇಂದು ದಶಕಗಳ ದುರುಪಯೋಗಿ ಆಡಳಿತಕ್ಕೆ ಅಂತ್ಯ ಸಿಗುತ್ತಿದ್ದು, ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಡಬಲ್ ಎಂಜಿನ್ ಯುಗಕ್ಕೆ ಚಾಲನೆ ದೊರಕುತ್ತಿದೆ. ‘ಸೋನಾರ್ ಬಾಂಗ್ಲಾ’ ಯುಗ ಅಧಿಕೃತವಾಗಿ ಆರಂಭವಾಗಿದೆ” ಎಂದು ಅವರು ಹೇಳಿದರು.
ಇನ್ನು ಇಂದಿನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ ಶುಕ್ರವಾರವೇ ಕೊಲ್ಕತ್ತಾಕ್ಕೆ ಆಗಮಿಸಿದ್ದರು. ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಕೂಡ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದರು.
ಅಂದಹಾಗೆ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ. ಸುವೇಂದು ಅಧಿಕಾರಿ ನಂದಿಗ್ರಾಮ ಮತ್ತು ಭವಾನೀಪುರ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಭವಾನೀಪುರ ಕ್ಷೇತ್ರದಲ್ಲಿ ಅವರು ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಇದು ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಅಂತೆಯೇ 15 ವರ್ಷಗಳ ಕಾಲ ರಾಜ್ಯವನ್ನು ಆಡಳಿತ ನಡೆಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 80 ಸ್ಥಾನಗಳನ್ನು ಮಾತ್ರ ಗೆದ್ದಿದೆ.
Advertisement