

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ನಿನ್ನೆ ಶುಕ್ರವಾರ ಆಯ್ಕೆ ಮಾಡಲಾಗಿದ್ದು, ಇದರೊಂದಿಗೆ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗುವ ಹಾದಿ ಸುಗಮವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ, ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರಿಯವರ ಹೆಸರನ್ನು ಪ್ರಸ್ತಾಪಿಸಲಾಯಿತು ಮತ್ತು ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರು ಹಾಗೂ ಹಿರಿಯ ಪಕ್ಷದ ನಾಯಕರ ಸಮ್ಮುಖದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತವಾಗಿ ಘೋಷಿಸಿದರು.
ಆಯ್ಕೆಯಾದ ಕೆಲವೇ ಹೊತ್ತಿನಲ್ಲಿ ಅಧಿಕಾರಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಆರ್ ಎನ್ ರವಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ರಾಜ್ಯಪಾಲರು ಇಂದು ಕೋಲ್ಕತ್ತಾದಲ್ಲಿ ಬ್ರಿಗೇಡ್ ಆಟದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿರುವ ನಿರೀಕ್ಷೆಯಿದೆ.
ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿಯನ್ನು ಹೊಂದಿದ ಎರಡನೇ ರಾಜ್ಯವಾಗಿ ಪಶ್ಚಿಮ ಬಂಗಾಳ ಹೊರಹೊಮ್ಮಿದೆ. ಕಳೆದ ತಿಂಗಳು ಸಾಮ್ರಾಟ್ ಚೌಧರಿ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದಲ್ಲಿ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆಯಾಗಿತ್ತು.
ಅಧಿಕಾರಿ ಅವರಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ ಸ್ಥಿರ ಆಡಳಿತ ನೀಡುವ ಜೊತೆಗೆ ಬಂಗಾಳ ಜನರ ಆಶಯಗಳನ್ನು ಈಡೇರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ನಾನು ಸುಬೇಂದು ಅವರನ್ನು ಬಹುಕಾಲದಿಂದ ತಿಳಿದಿದ್ದೇನೆ. ಅವರು ಹೋರಾಟಗಾರರು. ಆಡಳಿತದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಟಿಎಂಸಿಯನ್ನು ಪ್ರತಿಯೊಂದು ಹಂತದಲ್ಲೂ ಎದುರಿಸಿದ್ದಾರೆ. ನಮ್ಮ ತಂಡದೊಂದಿಗೆ ಅವರು ಬಂಗಾಳದಲ್ಲಿ ಉತ್ತಮ ಆಡಳಿತ ನೀಡುವರು ಎಂಬ ವಿಶ್ವಾಸ ನನಗಿದೆ. ಅವರು ನಡೆಸಿದ ಹೋರಾಟ ಈಗ ಫಲ ನೀಡಿದೆ. 321ಕ್ಕೂ ಹೆಚ್ಚು ಕಾರ್ಯಕರ್ತರ ತ್ಯಾಗ ಇಂದು ಸಾರ್ಥಕವಾಗಿದೆ ಎಂದು ಅಮಿತ್ ಶಾ ಹೇಳಿದರು.
ಇದಕ್ಕೂ ಮೊದಲು ಬಿಜೆಪಿ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಕೂಡ ಮುಖ್ಯಮಂತ್ರಿ ಪದಕ್ಕೆ ಅಧಿಕಾರಿಯವರ ಹೆಸರನ್ನು ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬಳಿಕ ಭಟ್ಟಾಚಾರ್ಯ ಹಾಗೂ ಅಧಿಕಾರಿ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದರು.
ಬಂಗಾಳ ರಾಜಕೀಯದಲ್ಲಿ ಬಿಜೆಪಿಯ ದೈತ್ಯ ಸಂಹಾರಕ ಎಂದು ಪರಿಗಣಿಸಲ್ಪಡುವ ಅಧಿಕಾರಿ, ನಂದಿಗ್ರಾಮ ಮತ್ತು ಭಾವನಿಪುರ ವಿಧಾನಸಭಾ ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ. ಭಾವನಿಪುರ ಅವರು ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಕುರಿತು ಅಮಿತ್ ಶಾ ಅವರ ಸಮ್ಮುಖದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿಗಳಲ್ಲಿ ಒಬ್ಬರು ಮಹಿಳಾ ನಾಯಕಿಯಾಗುವ ಸಾಧ್ಯತೆಯಿದೆ.
ಮತ್ತೊಂದು ಉಪ ಮುಖ್ಯಮಂತ್ರಿಯ ಸ್ಥಾನವನ್ನು ಉತ್ತರ ಬಂಗಾಳದ ನಾಯಕರಿಗೆ ನೀಡುವ ಸಾಧ್ಯತೆ ಇದ್ದು, ಶಂಕರ್ ಘೋಷ್ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಸುಮಾರು ಎರಡು ದಶಕಗಳ ನಂತರ ಪಶ್ಚಿಮ ಬಂಗಾಳದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಮರುಕಳಿಸುವ ಸಾಧ್ಯತೆ ಇದೆ. ಎಡಪಂಥೀಯ ಆಡಳಿತದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ಸರ್ಕಾರದಲ್ಲಿ ದಿವಂಗತ ಸಿಪಿಎಂ ಹಿರಿಯ ನಾಯಕ ಬುದ್ಧದೇವ ಭಟ್ಟಾಚಾರ್ಯ ಈ ಹುದ್ದೆಯನ್ನು ಅಲಂಕರಿಸಿದ್ದವರಲ್ಲಿ ಒಬ್ಬರಾಗಿದ್ದರು.
ಭಾರತದ ಅನೇಕ ಭಾಗಗಳಲ್ಲಿ ತನ್ನ ಪ್ರಭಾವ ವಿಸ್ತರಿಸಿದರೂ, ಬಿಜೆಪಿಗೆ ಪಶ್ಚಿಮ ಬಂಗಾಳವು ಬಹುಕಾಲದವರೆಗೆ ಪ್ರಮುಖ ಸವಾಲಿನ ರಾಜ್ಯವಾಗಿಯೇ ಉಳಿದಿತ್ತು. ಆದ್ದರಿಂದ ಈ ಜಯವು ಕೇಸರಿ ನಾಯಕತ್ವಕ್ಕೆ ತತ್ವಶಾಸ್ತ್ರೀಯ, ಸಂಘಟನಾ ಹಾಗೂ ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಕಳೆದ ದಶಕದಲ್ಲಿ ಪಕ್ಷವು ರಾಜ್ಯದಲ್ಲಿ ಅಪಾರ ರಾಜಕೀಯ ಬಂಡವಾಳ ಹೂಡಿಕೆ ಮಾಡಿತ್ತು.
ಸುವೇಂದು ಅಧಿಕಾರಿಯವರಿಗೆ ಈ ಕ್ಷಣವು ರಾಜಕೀಯ ಜೀವನದ ಮಹತ್ವದ ತಿರುವಾಗಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಅಂತಿಮವಾಗಿ ಬಿಜೆಪಿಯವರೆಗೆ ಸಾಗಿದ ಅವರ ರಾಜಕೀಯ ಪಯಣವು, ಮಮತಾ ಬ್ಯಾನರ್ಜಿ ಅವರ ಆಪ್ತ ಸಹಚರನಿಂದ ಅವರ ತೀವ್ರ ರಾಜಕೀಯ ಎದುರಾಳಿಯಾಗಿ, ಬಳಿಕ ಬಂಗಾಳದ ಮೊದಲ ಕೇಸರಿ ಸರ್ಕಾರದ ಮುಖವಾಗುವವರೆಗೆ ಬೆಳವಣಿಗೆಯಾಗಿದೆ.
ಮಾಜಿ ಕೇಂದ್ರ ಸಚಿವ ಸಿಸಿರ್ ಅಧಿಕಾರಿ ಅವರ ಪುತ್ರರಾಗಿರುವ 55 ವರ್ಷದ ಅಧಿಕಾರಿ, ಬಂಗಾಳದಲ್ಲಿ ಎಡಪಂಥೀಯ ಪ್ರಾಬಲ್ಯ ಉನ್ನತ ಮಟ್ಟದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕ ‘ಛಾತ್ರ ಪರಿಷತ್’ ಮೂಲಕ ರಾಜಕೀಯ ಜೀವನ ಆರಂಭಿಸಿದರು.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಭಾರೀ ಜಯ ಸಾಧಿಸಿತು. ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತವಾಯಿತು.
Advertisement