

ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲು ಅವರ ಗೆಳತಿ ನಟಿ ತ್ರಿಶಾ ಕೃಷ್ಣನ್ ಅವರು ಇಂದು ಬೆಳಗ್ಗೆ ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ಆಗಮಿಸಿದಾಗ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿತು. ಅಲ್ಲಿದ ಕ್ಯಾಮರಾ ಕಣ್ಣುಗಳು ಅವರನ್ನು ಸೆರೆಹಿಡಿದವು.
ನೀಲಿ ಬಣ್ಣದ ರೇಷ್ಮೆ ಸೀರೆ ಮತ್ತು ಬಂಗಾರದ ಅಲಂಕಾರಗಳೊಂದಿಗೆ ತ್ರಿಶಾ ಅವರು ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡರು. ಮದುವೆಗೆ ಸುಂದರವಾಗಿ ಸಿದ್ಧವಾಗಿ ಬಂದವರಂತೆ ಬಂದರು.
ಕ್ರೀಮ್ ಬಣ್ಣದ ಎಂಬ್ರಾಯ್ಡರಿ ಬ್ಲೌಸ್, ಸ್ಟೇಟ್‌ಮೆಂಟ್ ಜುವೆಲ್ಸ್, ಡೈಮಂಡ್–ರೂಬಿ ಚೋಕರ್ ಮತ್ತು ಮ್ಯಾಚಿಂಗ್ ಕಿವಿಯೋಲೆಗಳನ್ನು ಧರಿಸಿದ್ದರು. ಮೇಕಪ್ ಸರಳ ಸುಂದರವಾಗಿತ್ತು. ಚಿಕ್ಕ ಬಿಂದಿ ಮತ್ತು ಮಲ್ಲಿಗೆಯ ಹೂಗಳು ಜುಟ್ಟಿಗೆ ವಿಶೇಷ ಅಲಂಕಾರ ನೀಡಿದವು.
ಚೆನ್ನೈನ ತಮ್ಮ ನಿವಾಸದಿಂದ ಹೊರಡುವಾಗ ತ್ರಿಶಾ ಅವರು “ಈ ಐತಿಹಾಸಿಕ ಕ್ಷಣವನ್ನು ನೋಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು. ಅವರು ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಆಗಮಿಸಿದರು.
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತ್ತು. ಇದು ದಶಕಗಳಿಂದ ರಾಜ್ಯವನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ದೊಡ್ಡ ಸೋಲಾಗಿ ಪರಿಣಮಿಸಿತು.
ಚುನಾವಣೆ ಫಲಿತಾಂಶ ದಿನವಾದ ಮೇ 4ರಂದು ತ್ರಿಶಾ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದೇ ದಿನ ಅವರ ಜನ್ಮದಿನವೂ ಆಗಿತ್ತು. ಫಲಿತಾಂಶಗಳಲ್ಲಿ ಟಿವಿಕೆಯ ಆರಂಭಿಕ ಮುನ್ನಡೆ ಕಾಣಿಸಿಕೊಂಡ ಸಂದರ್ಭದಲ್ಲಿ ಅವರ ಈ ಭೇಟಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಯಿತು.
ನಂತರ ಅವರು ವಿಜಯ್ ಅವರ ಮನೆಗೆ ಭೇಟಿ ನೀಡಿದ್ದು ಕೂಡ ಸುದ್ದಿಯಾಯಿತು. ಏಪ್ರಿಲ್ 23ರಂದು ಮತದಾನ ಮಾಡಿದ ಬಳಿಕವೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಅಭಿಮಾನಿಗಳು ವಿಜಯ್ ಅವರ ಪಕ್ಷಕ್ಕೆ ಪರೋಕ್ಷ ಬೆಂಬಲವೆಂದು ವ್ಯಾಖ್ಯಾನಿಸಿದ್ದರು.
ತ್ರಿಶಾ ಮತ್ತು ವಿಜಯ್ ತಮಿಳು ಸಿನೆಮಾದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರಾಗಿದ್ದು, ಗಿಲ್ಲಿ, ತಿರುಪ್ಪಾಚಿ, ಆತಿ, ಕುರುವಿ ಮತ್ತು ಲಿಯೋ ಸೇರಿದಂತೆ ಐದು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.ವಿಜಯ್ ಅವರು ತಮ್ಮ ಪತ್ನಿ ಸಂಗೀತ ಜೊತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ ನಂತರ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದು, ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ.
Advertisement