ಮಿತವ್ಯಯಕ್ಕೆ ಪ್ರಧಾನಿ ಮೋದಿ ಹೆಜ್ಜೆ: ಎಸ್‌ಪಿಜಿ ಭದ್ರತಾ ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ,ಬಿಜೆಪಿ ಸಿಎಂಗಳಿಗೂ ಸೂಚನೆ, EV ಗೆ ಆದ್ಯತೆ

ಇತ್ತೀಚೆಗೆ ವಡೋದರಾ ಮತ್ತು ಗುವಾಹಟಿ ಭೇಟಿಗಳ ವೇಳೆ ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.
PM Modi Orders Cut In Convoy Size
ಪ್ರಧಾನಿ ಮೋದಿ ಬೆಂಗಾವಲು ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ
Updated on

ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸಂಕಷ್ಟ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೇ ಇಂಧನ ಉಳಿತಾಯ ಹಾಗೂ ಮಿತವ್ಯಯ ಕ್ರಮಗಳ ಭಾಗವಾಗಿ ತಮ್ಮ ಎಸ್‌ಪಿಜಿ ಭದ್ರತಾ ಪಡೆಗೆ ನಿಯೋಜನೆಗೊಳ್ಳುವ ವಾಹನಗಳ ಸಂಖ್ಯೆಯಲ್ಲಿ (official convoy vehicle) ಶೇಕಡಾ 50ರಷ್ಟು ಕಡಿತಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ.

ಇತ್ತೀಚೆಗೆ ವಡೋದರಾ ಮತ್ತು ಗುವಾಹಟಿ ಭೇಟಿಗಳ ವೇಳೆ ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಅಮೆರಿಕಾ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕಡಿಮೆ ಇಂಧನ ಬಳಕೆಗೆ ಪ್ರೋತ್ಸಾಹ ನೀಡುವುದು ಮತ್ತು ತಾವು ನುಡಿದಂತೆ ದೇಶದ ನಾಗರಿಕರ ಮುಂದೆ ಮಾದರಿಯಾಗಿ ನಡೆದುಕೊಳ್ಳುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ.

ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ವಿಶೇಷ ಭದ್ರತಾ ಗುಂಪು (SPG) ಗೆ ಬೆಂಗಾವಲು ವಾಹನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೂಡ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಇದಕ್ಕಾಗಿ ಹೊಸ ವಾಹನಗಳನ್ನು ಖರೀದಿಸುವ ಬದಲು ಈಗಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ಪ್ರಧಾನ ಮಂತ್ರಿ ಆದೇಶ ನೀಡಿದ್ದಾರೆ.

PM Modi Orders Cut In Convoy Size
ಚಿನ್ನಾಭರಣ ಖರೀದಿಸದಂತೆ ಮೋದಿ ಮನವಿ: ಪ್ರಧಾನಿ ಮಾತಿನ ಹಿಂದಿನ ಅರ್ಥವೇನು? ಇಲ್ಲಿದೆ ಉತ್ತರ..

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲಾ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಧಾನಿ ಮೋದಿ ಅವರ ಭಾಷಣದ ಪ್ರತಿಗಳನ್ನು ಹಂಚಿಕೆ ಮಾಡಿದೆ. ಆ ದಾಖಲೆಯಲ್ಲಿ ಪ್ರಸ್ತುತ ಸಂಕಷ್ಟದ ಸಂದರ್ಭ ಮಿತವ್ಯಯಕ್ಕೆ ಕರೆ ಹಾಗೂ ಅನುಸರಿಸಬಹುದಾದ ಕಾರ್ಯಯೋಜನೆ ಸೇರಿಸಲಾಗಿತ್ತು ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಕಾರ್ಯಯೋಜನೆಯಲ್ಲಿ ದೇಶದ ನಾಗರಿಕರು ಎಲೆಕ್ಟ್ರಿಕ್ ವಾಹನಗಳ ಹೆಚ್ಚುವರಿ ಬಳಕೆ, ಇಂಧನ ಬಳಕೆ ಕಡಿತ ಹಾಗೂ ಅನಗತ್ಯ ಪ್ರಯಾಣವನ್ನು ತಗ್ಗಿಸಲು ಆನ್‌ಲೈನ್ ಮೂಲಕ ಸಭೆಗಳನ್ನು ಹೆಚ್ಚೆಚ್ಚು ನಡೆಸುವಂತೆ ಸೂಚಿಸಲಾಗಿದೆ. ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ ಉಂಟಾದ ಜಾಗತಿಕ ಆರ್ಥಿಕ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಆಡಳಿತದ ಕಾರ್ಯಕ್ಷಮತೆ ಮತ್ತು ಭದ್ರತಾ ಮಾನದಂಡಗಳನ್ನು ಕಾಪಾಡಿಕೊಂಡೇ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಪ್ರಾಯೋಗಿಕ ಮಿತವ್ಯಯ ಕ್ರಮಗಳನ್ನು ಅನುಸರಿಸಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PM Modi Orders Cut In Convoy Size
Explainer: ಮಿತವ್ಯಯಕ್ಕೆ ಮೋದಿ ಕರೆ; ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72 ಬಿಲಿಯನ್ ಡಾಲರ್ ಹಿಂದಿನ ರಹಸ್ಯ..

ಈ ಮಿತವ್ಯಯ ಕ್ರಮದ ಪ್ರಭಾವ ಈಗಾಗಲೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಹಲವು ಹಿರಿಯ ನಾಯಕರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ.

ಇದು ಹೆಚ್ಚಿದ ಭೌರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಜವಾಬ್ದಾರಿಯುತ ಇಂಧನ ಬಳಕೆ ಮತ್ತು ಸಂಪನ್ಮೂಲ ಸಂರಕ್ಷಣೆ ಕುರಿತ ಕೇಂದ್ರ ಸರ್ಕಾರದ ಕರೆಗೆ ರಾಜ್ಯ ಆಡಳಿತಗಳನ್ನು ಹೊಂದಿಸುವ ಪ್ರಯತ್ನವೆಂದು ಕಾಣಲಾಗುತ್ತಿದೆ.

ಭಾನುವಾರ ಪ್ರಧಾನಿ ಮೋದಿ ದೇಶದ ನಾಗರಿಕರಿಗೆ ಎಂಟು ಪ್ರಮುಖ ಸಲಹೆಗಳನ್ನು ನೀಡಿ “ರಾಷ್ಟ್ರದ ಜವಾಬ್ದಾರಿಯುತ” ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು. ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಕಚ್ಚಾ ತೈಲ ಬೆಲೆ ಏರಿಕೆ, ಸರಬರಾಜು ಸರಪಳಿ ವ್ಯತ್ಯಯ ಮತ್ತು ದರ ಏರಿಕೆಯ ನಡುವೆಯೇ ಅವರು ಈ ಮನವಿ ಮಾಡಿದರು.

ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಅಗತ್ಯವಿಲ್ಲದ ಪ್ರಯಾಣ ತಪ್ಪಿಸುವುದು ಹಾಗೂ ಆಮದು ವಸ್ತುಗಳ ಬದಲು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಜನರಿಗೆ ಸಲಹೆ ನೀಡಿದರು. ಎಲ್ಲದಕ್ಕೂ ಆಮದುಗಳ ಮೇಲೆ ಅವಲಂಬಿತರಾದರೆ ದೇಶ ಹೇಗೆ ಮುಂದುವರಿಯುತ್ತದೆ ಎಂದು ಪ್ರಧಾನಿ ಪ್ರಶ್ನಿಸಿದರು.

ವಿದೇಶಿ ವಿನಿಮಯ ಸಂಗ್ರಹದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಂದು ವರ್ಷದವರೆಗೆ ಅನಗತ್ಯ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ಜನರಿಗೆ ಸಲಹೆ ನೀಡಿದರು. ಜೊತೆಗೆ, ಸಾಧ್ಯವಾದಲ್ಲಿ ವಿದೇಶಿ ಪ್ರವಾಸವನ್ನು ತಪ್ಪಿಸಿ, ವರ್ಕ್ ಫ್ರಂ ಹೋಮ್ ಮತ್ತು ಆನ್ ಲೈನ್ ನಲ್ಲಿ ಕೆಲಸದ ವಿಧಾನಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com