ಮೇ 20ರಂದು ದೇಶಾದ್ಯಂತ 12 ಲಕ್ಷ ಔಷಧ ಅಂಗಡಿ ಮಾಲೀಕರ ಮುಷ್ಕರ, ಕಾರಣ ಏನು ಗೊತ್ತಾ?

ಸಣ್ಣ ಪಟ್ಟಣಗಳು ಮತ್ತು ಅರೆನಗರ ಪ್ರದೇಶಗಳಲ್ಲಿ ಸ್ಥಳೀಯ ಮೆಡಿಕಲ್ ಅಂಗಡಿಗಳೇ ಮುಖ್ಯ ಔಷಧ ಮೂಲವಾಗಿರುವುದರಿಂದ ಪರಿಣಾಮ ಹೆಚ್ಚು ಕಾಣಿಸಬಹುದು ಎನ್ನಲಾಗಿದೆ.
12 lakh chemists across India are going on strike
ಔಷಧ ಅಂಗಡಿಗಳ ಮುಷ್ಕರ
Updated on

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಭಾರತದಾದ್ಯಂತ ಸುಮಾರು 12 ಲಕ್ಷಕ್ಕಿಂತ ಹೆಚ್ಚು ಔಷಧ ವ್ಯಾಪಾರಿಗಳು ಮತ್ತು ಔಷಧ ವಿತರಕರು ಮೇ 20ರಂದು ದೇಶವ್ಯಾಪಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.

ಈ ಮುಷ್ಕರಕ್ಕೆ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಕರೆ ನೀಡಿದ್ದು, ಈ ಒಂದು ದಿನದ ಬಂದ್‌ನಿಂದ ಅನೇಕ ರಾಜ್ಯಗಳಲ್ಲಿ ಸಾಮಾನ್ಯ ಔಷಧ ಖರೀದಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಅರೆನಗರ ಪ್ರದೇಶಗಳಲ್ಲಿ ಸ್ಥಳೀಯ ಮೆಡಿಕಲ್ ಅಂಗಡಿಗಳೇ ಮುಖ್ಯ ಔಷಧ ಮೂಲವಾಗಿರುವುದರಿಂದ ಪರಿಣಾಮ ಹೆಚ್ಚು ಕಾಣಿಸಬಹುದು ಎನ್ನಲಾಗಿದೆ.

ಆನ್ಲೈನ್ ಪ್ಲಾಟ್ ಫಾರ್ಮ್ ಗಳ ವಿರುದ್ಧ ಆಕ್ರೋಶ

AIOCD (All India Organisation of Chemists and Druggists) ಪ್ರಕಾರ, ಸುಮಾರು 12.4 ಲಕ್ಷ ಔಷಧ ವ್ಯಾಪಾರಿಗಳು ಮತ್ತು ವಿತರಕರು ಆನ್‌ಲೈನ್ ಫಾರ್ಮಸಿ ವೇದಿಕೆಗಳ ಹೆಚ್ಚುತ್ತಿರುವ ಪ್ರಭಾವ ಮತ್ತು “ನಿಯಂತ್ರಣವಿಲ್ಲದ ಕಾರ್ಯಾಚರಣೆ” ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಸಂಘಟನೆಯು ಕೆಲವು ಆನ್‌ಲೈನ್ ಔಷಧ ವಿತರಣಾ ಕಂಪನಿಗಳು ವೈದ್ಯರ ಚೀಟಿ ಪರಿಶೀಲನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಪರಂಪರಾಗತ ಮೆಡಿಕಲ್ ಅಂಗಡಿಗಳಿಗೆ ಹಾನಿಯಾಗುವ ರೀತಿಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ ಎಂದು ಆರೋಪಿಸಿದೆ.

12 lakh chemists across India are going on strike
SIR Stage 3: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೇ 30 ರಿಂದ- ಚುನಾವಣಾ ಆಯೋಗ

ಅಧಿಸೂಚನೆ ಹಿಂಪಡೆತಕ್ಕೆ ಒತ್ತಾಯ

ಈ ಮುಷ್ಕರವು ಪರಂಪರಾಗತ ಮೆಡಿಕಲ್ ಅಂಗಡಿಗಳು ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಫಾರ್ಮಸಿ ವೇದಿಕೆಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಕೋವಿಡ್-19 ಮಹಾಮಾರಿ ಸಮಯದಲ್ಲಿ ನೀಡಲಾದ ನಿಯಂತ್ರಣ ಸಡಿಲಿಕೆಯನ್ನು ಆನ್‌ಲೈನ್ ಔಷಧ ಮಾರಾಟಗಾರರು ದುರುಪಯೋಗಪಡಿಸಿಕೊಂಡು, ವೈದ್ಯರ ಚೀಟಿಗಳ ಕಠಿಣ ಭೌತಿಕ ಪರಿಶೀಲನೆಯಿಲ್ಲದೆ ಔಷಧ ವಿತರಣೆ ಮುಂದುವರಿಸುತ್ತಿದ್ದಾರೆ ಎಂದು AIOCD ಆರೋಪಿಸಿದೆ. ಈ ಹಿನ್ನೆಲೆಯಲ್ಲಿ G.S.R. 220(E) ಮತ್ತು G.S.R. 817(E) ಅಧಿಸೂಚನೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಸಂಘಟನೆ ಒತ್ತಾಯಿಸಿದೆ.

ಅಲ್ಲದೆ ಆನ್‌ಲೈನ್ ವೇದಿಕೆಗಳಲ್ಲಿ AI ಮೂಲಕ ಸೃಷ್ಟಿಸಲಾದ ನಕಲಿ ವೈದ್ಯರ ಚೀಟಿಗಳ ದುರುಪಯೋಗವು ಪ್ರಮುಖ ಚಿಂತೆಯ ವಿಷಯವಾಗಿದೆ ಎಂದು ಔಷಧ ವ್ಯಾಪಾರಿಗಳು ತಿಳಿಸಿದ್ದಾರೆ. ಇಂತಹ ಕ್ರಮಗಳಿಂದ ಆಂಟಿಬಯಾಟಿಕ್‌ಗಳು, ಮನೋವೈಕಲ್ಯ ಔಷಧಗಳು ಮತ್ತು ವ್ಯಸನಕಾರಿ ಔಷಧಗಳಿಗೆ ನಿಯಂತ್ರಣವಿಲ್ಲದ ಪ್ರವೇಶ ಸಿಗುವ ಅಪಾಯವಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು AIOCD ಎಚ್ಚರಿಸಿದೆ.

ಪ್ರಧಾನಿ ಮೋದಿಗೂ ಮನವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಆನ್‌ಲೈನ್ ಔಷಧ ಮಾರಾಟ ಮತ್ತು ರೋಗಿಗಳ ಸುರಕ್ಷತಾ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಲವು ಬಾರಿ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಔಷಧ ವ್ಯಾಪಾರಿಗಳ ಸಂಘಟನೆ ತಿಳಿಸಿದೆ. ಪರಂಪರಾಗತ ಮೆಡಿಕಲ್ ಅಂಗಡಿಗಳು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಕಾಯ್ದೆಯಡಿ ಕಠಿಣ ಪರಿಶೀಲನಾ ನಿಯಮಗಳನ್ನು ಪಾಲಿಸಬೇಕಾಗಿರುವಾಗ, ಆನ್‌ಲೈನ್ ವೇದಿಕೆಗಳು ಸ್ಪಷ್ಟ ರಾಷ್ಟ್ರೀಯ ನಿಯಂತ್ರಣ ವ್ಯವಸ್ಥೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆ ಆರೋಪಿಸಿದೆ.

ದೇಶಾದ್ಯಂತ ಪರಿಣಾಮ

ಈ ಪ್ರಸ್ತಾವಿತ ಬಂದ್ ದೇಶದಾದ್ಯಂತ ಸಾಮಾನ್ಯ ಔಷಧ ಖರೀದಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದಾಗ್ಯೂ, ತುರ್ತು ಔಷಧ ಸೇವೆಗಳು ಮತ್ತು ಆಸ್ಪತ್ರೆಗಳ ಮೆಡಿಕಲ್ ಅಂಗಡಿಗಳು ಅನೇಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಔಷಧ ವ್ಯಾಪಾರಿಗಳ ಸಂಘಟನೆಗಳು ಸ್ಪಷ್ಟಪಡಿಸಿವೆ.

ಕರ್ನಾಟಕದಲ್ಲೂ ಮುನ್ನೆಚ್ಚರಿಕೆ

ಕರ್ನಾಟಕ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ವ್ಯತ್ಯಯವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಕರ್ನಾಟಕದಲ್ಲಿ ಮೇ 20ರಂದು ಅಗತ್ಯ ಔಷಧಗಳ ಸರಬರಾಜು ನಿರಂತರವಾಗಿರಲು ಡ್ರಗ್ ಇನ್ಸ್‌ಪೆಕ್ಟರ್‌ಗಳು ಮತ್ತು ಆಸ್ಪತ್ರೆಗಳ ಮೆಡಿಕಲ್ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ದೆಹಲಿ ಸೇರಿದಂತೆ ಅನೇಕ ರಾಜ್ಯಗಳ ಔಷಧ ವ್ಯಾಪಾರಿಗಳ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಸಾವಿರಾರು ಮೆಡಿಕಲ್ ಅಂಗಡಿಗಳು ಆ ದಿನ ಮುಚ್ಚಲ್ಪಡುವ ಸಾಧ್ಯತೆ ಇದೆ. ಕೈಗಾರಿಕಾ ವೀಕ್ಷಕರ ಪ್ರಕಾರ, ಇದು ಇತ್ತೀಚಿನ ವರ್ಷಗಳಲ್ಲಿ ಔಷಧ ಚಿಲ್ಲರೆ ವ್ಯಾಪಾರ ಕ್ಷೇತ್ರದ ಅತಿದೊಡ್ಡ ಸಂಯೋಜಿತ ಬಂದ್‌ಗಳಲ್ಲಿ ಒಂದಾಗಬಹುದು.

ಅಂತೆಯೇ ಸರ್ಕಾರ ತನ್ನ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು AIOCD ಎಚ್ಚರಿಸಿದೆ. ಇದೇ ವೇಳೆ, ನಿಯಮಿತ ಔಷಧ ಸೇವನೆ ಅವಲಂಬಿಸಿರುವ ರೋಗಿಗಳು ಮುಷ್ಕರದ ದಿನದ ಅಸೌಕರ್ಯ ತಪ್ಪಿಸಲು ಅಗತ್ಯ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com