

ನವದೆಹಲಿ: ಜಾಗತಿಕವಾಗಿ ಚಿಂತೆಗೀಡು ಮಾಡಿರುವ ಇರಾನ್ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಆರಾಘ್ಚಿ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಸ್ನೇಹಪರ ರಾಷ್ಟ್ರಗಳು ವ್ಯಾಪಾರ ಮತ್ತು ಸಾಗಾಣಿಕೆ ಭದ್ರತೆಗಾಗಿ ಇರಾನ್ ಮೇಲೆ ನಂಬಿಕೆ ಇಡಬಹುದು ಎಂದು ಅವರು ಒತ್ತಿ ಹೇಳಿದರು.
'ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದ Strait of Hormuz ಪ್ರದೇಶದ ಭದ್ರತೆಯ ರಕ್ಷಕರಾಗಿ ಇರಾನ್ ತನ್ನ “ಐತಿಹಾಸಿಕ ಕರ್ತವ್ಯ”ವನ್ನು ಮುಂದುವರಿಸುತ್ತದೆ ಎಂದರು.
ಇದೇ ವಿಚಾರವಾಗಿ X ನಲ್ಲಿ ಮಾಡಿದ ಅರಾಗ್ಛಿ, 'ಜೈಶಂಕರ್ ಅವರೊಂದಿಗೆ ನಡೆದ ಚರ್ಚೆಗಳು ಪ್ರಾದೇಶಿಕ ಬೆಳವಣಿಗೆಗಳ ಕುರಿತಾಗಿದ್ದು, ಜಲಮಾರ್ಗದ ಮೂಲಕ ಸುರಕ್ಷಿತ ವಾಣಿಜ್ಯ ಸಂಚಾರವನ್ನು ಖಚಿತಪಡಿಸುವಲ್ಲಿ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ವಿರುದ್ಧ ವಾಗ್ದಾಳಿ
ಇದೇ ವೇಳೆ ಅಮೆರಿಕದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, 'ಅಮೆರಿಕದ ದಬ್ಬಾಳಿಕೆಗೆ ಇರಾನ್ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ಅಮೆರಿಕದ ಒತ್ತಡಕ್ಕೆ ಇರಾನ್ ನೀಡುತ್ತಿರುವ ಪ್ರತಿರೋಧ “ಹೊಸದೇನಲ್ಲ”. ಇಂತಹ ಸವಾಲುಗಳನ್ನು ಎದುರಿಸುತ್ತಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಅವರು ಕರೆ ನೀಡಿದರು.
ಮತ್ತೊಂದು ಪೋಸ್ಟ್‌ನಲ್ಲಿ, ಇಂತಹ ಒತ್ತಡಗಳನ್ನು ಎದುರಿಸುತ್ತಿರುವ ದೇಶಗಳು ಒಟ್ಟಾಗಿ ಕೆಲಸ ಮಾಡಿ, ಇಂತಹ ನೀತಿಗಳನ್ನು “ಇತಿಹಾಸದ ಕಸದ ಬುಟ್ಟಿಗೆ” ತಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇತ್ತ ಬ್ರಿಕ್ಸ್ ಸಭೆಯಲ್ಲಿ ಇರಾನ್ ಪರವಾಗಿ ಭಾಷಣ ಮಾಡಿದ ಅರಾಗ್ಚಿ, 'ಪಾಶ್ಚಾತ್ಯ ಪ್ರಾಬಲ್ಯವನ್ನು ಮುರಿಯುವ ಅಗತ್ಯವಿದೆ. ಅಂತರರಾಷ್ಟ್ರೀಯ ಸಂಸ್ಥೆಗಳು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕೆಂದು ಹೇಳಿದರು.
ಇರಾನ್ ಸರ್ಕಾರದ ಪ್ರಕಾರ, ಉದಯೋನ್ಮುಖ ಆರ್ಥಿಕತೆಗಳ ನಡುವೆ ಬಲವಾದ ಸಹಕಾರದ ಮೂಲಕ ಹೆಚ್ಚು ಸಮತೋಲನಯುತ ಜಾಗತಿಕ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ವವನ್ನು ಅವರು ವಿವರಿಸಿದರು. ಈ ಹೇಳಿಕೆಗಳು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಹೊರಬಂದಿದ್ದು, ಜಾಗತಿಕ ತೈಲ ಸರಬರಾಜಿನ ಮಹತ್ವದ ಭಾಗ ಸಾಗುವ ಹೋರ್ಮುಜ್ ಜಲಸಂಧಿಯ ಭದ್ರತೆ ಬಗ್ಗೆ ಹೆಚ್ಚುತ್ತಿರುವ ಗಮನ ಸೆಳೆದಿವೆ.
Advertisement