

ಟೆಹ್ರಾನ್: ಮಧ್ಯ ಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನಡೆಸುತ್ತಿರುವ ಸಂಧಾನ ಪ್ರಕ್ರಿಯೆ ಸಂಪೂರ್ಣವಾಗಿ ವಿಫಲವಾಗಿಲ್ಲ.. ಆದರೆ ಅಮೆರಿಕದ ವರ್ತನೆ ಮತ್ತು ಪರಸ್ಪರ ಅವಿಶ್ವಾಸದ ಕಾರಣದಿಂದ ಆ ಪ್ರಕ್ರಿಯೆ ಅತ್ಯಂತ ಕಠಿಣ ಹಾದಿಯಲ್ಲಿ ಸಾಗುತ್ತಿದೆ ಎಂದು ಇರಾನ್ ಹೇಳಿದೆ.
ಈ ಕುರಿತು ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಚೀನಾ ಯಾವುದೇ ರೀತಿಯಲ್ಲಿ ರಾಜತಾಂತ್ರಿಕ ಸಹಾಯ ಮಾಡಲು ಮುಂದಾದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅರಾಘ್ಚಿ, 'ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಪುನರುಜ್ಜೀವನಗೊಳಿಸುವಲ್ಲಿ ಚೀನಾ ಹಿಂದೆ ಸಹಾಯ ಮಾಡಿತ್ತು. ಇರಾನ್ ಮತ್ತು ಚೀನಾ ಪರಸ್ಪರ ತಂತ್ರಜ್ಞಾನದ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಅವರು ಹೇಳಿದರು.
ಚೀನಾದ ಉದ್ದೇಶಗಳು ಉತ್ತಮವಾಗಿವೆ ಎಂಬ ವಿಶ್ವಾಸ ನಮಗಿದೆ. ಆದ್ದರಿಂದ ರಾಜತಾಂತ್ರಿಕ ಮಾತುಕತೆಗಳಿಗೆ ಸಹಾಯವಾಗುವ ಯಾವುದೇ ಕ್ರಮವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ವಾಗತಿಸುತ್ತದೆ. ಮಾತುಕತೆಗಳು ಉತ್ತಮ ಅಂತ್ಯಕ್ಕೇರಲಿ ಮತ್ತು ಅದರ ಮೂಲಕ Strait of Hormuz ಸಂಪೂರ್ಣ ಸುರಕ್ಷಿತವಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಇದರಿಂದ ಆ ಜಲಸಂಧಿಯ ಮೂಲಕ ಸಾಗುವ ನೌಕಾಯಾನ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರುವುದು ಸಾಧ್ಯವಾಗುತ್ತದೆ. ಚಾಬಹರ್ ಬಂದರು (Chabahar Port) ಕುರಿತು ಮಾತನಾಡಿದ ಅರಾಗ್ಚಿ, ಅದು ಭಾರತ ಮತ್ತು ಇರಾನ್ ನಡುವಿನ ಸಹಕಾರದ ಪ್ರತೀಕವಾಗಿದೆ ಎಂದು ಹೇಳಿದರು.
ಆ ಬಂದರಿನ ಅಭಿವೃದ್ಧಿಯಲ್ಲಿ ಭಾರತೀಯರು ಮಹತ್ವದ ಪಾತ್ರ ವಹಿಸಿದ್ದಕ್ಕೆ ನಾವು ಸಂತೋಷಪಡುತ್ತೇವೆ. ಆದರೆ ಅಮೆರಿಕದ ನಿರ್ಬಂಧಗಳ ಕಾರಣದಿಂದ ಅದರ ಅಭಿವೃದ್ಧಿ ಕೆಲ ಮಟ್ಟಿಗೆ ನಿಧಾನಗೊಂಡಿದೆ. ಆದರೂ ಈ ಬಂದರು ಭಾರತಕ್ಕೆ Central Asia, Caucasus ಮತ್ತು ನಂತರ Europe ತಲುಪಲು “ಸುವರ್ಣ ದ್ವಾರ”ವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ಸಾರಿಗೆ ಮಾರ್ಗದ ಮೂಲಕ ಯುರೋಪಿನ ರಾಷ್ಟ್ರಗಳು ಮತ್ತು ಮಧ್ಯ ಏಷ್ಯಾದ ದೇಶಗಳು ಸಹ ಹಿಂದೂ ಮಹಾಸಾಗರ (Indian Ocean ತಲುಪಲು ಅವಕಾಶ ಪಡೆಯಲಿವೆ. ಭಾರತವು ಚಾಬಹಾರ್ ಬಂದರಿನ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಲಿದೆ ಎಂಬ ನಿರೀಕ್ಷೆ ಇದೆ. ಈ ಬಂದರು ಭಾರತ ಹಾಗೂ ಸುತ್ತಮುತ್ತಲಿನ ದೇಶಗಳ ಹಿತಾಸಕ್ತಿಗೆ ಸಂಪೂರ್ಣ ಸೇವೆ ಸಲ್ಲಿಸುವ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲದೆ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ರಾಜತಾಂತ್ರಿಕತೆಯನ್ನು ಉತ್ತೇಜಿಸಲು ಭಾರತ ಇನ್ನಷ್ಟು ದೊಡ್ಡ ಪಾತ್ರ ವಹಿಸಬಹುದು. ಪರ್ಷಿಯನ್ ಗಲ್ಫ್ ಪ್ರದೇಶದ ಎಲ್ಲಾ ರಾಷ್ಟ್ರಗಳಿಗೂ ಭಾರತ ಸ್ನೇಹಿತ ರಾಷ್ಟ್ರವಾಗಿದೆ. ಈ ಪ್ರದೇಶದಲ್ಲಿ ಭಾರತ ವಹಿಸುವ ಯಾವುದೇ ಸಕಾರಾತ್ಮಕ ಮತ್ತು ರಚನಾತ್ಮಕ ಪಾತ್ರವನ್ನು ನಾವು ಮೆಚ್ಚುತ್ತೇವೆ ಎಂದು ಅರಾಗ್ಚಿ ಹೇಳಿದರು.
Advertisement