

ನವದೆಹಲಿ: ಕೇಂದ್ರ ಸರ್ಕಾರ ವಿದೇಶ ಪ್ರವಾಸಕ್ಕೆ ತೆರಿಗೆ ವಿಧಿಸಲಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವರದಿಗಳನ್ನು ಅಲ್ಲಗಳೆದಿದ್ದಾರೆ.
ವಿದೇಶ ಪ್ರವಾಸಗಳ ಮೇಲೆ ತೆರಿಗೆ, ಸೆಸ್ ಅಥವಾ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳನ್ನು ಸಂಪೂರ್ಣ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿದೇಶ ಪ್ರವಾಸಗಳ ಮೇಲೆ ತೆರಿಗೆ, ಸೆಸ್ ಅಥವಾ ಸರ್ಚಾರ್ಜ್ ವಿಧಿಸುವ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ, ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದ ಮಾಧ್ಯಮ ವರದಿಗೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, 'ಇದು ಸಂಪೂರ್ಣ ಸುಳ್ಳು. ಇದರಲ್ಲಿ ಅಲ್ಪ ಪ್ರಮಾಣದ ಸತ್ಯವೂ ಇಲ್ಲ. ವಿದೇಶ ಪ್ರವಾಸಗಳ ಮೇಲೆ ಇಂತಹ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ ‘Ease of Doing Business’ ಹಾಗೂ ‘Ease of Living’ ಸುಧಾರಣೆಗೆ ನಾವು ಬದ್ಧರಾಗಿದ್ದೇವೆ' ಎಂದು ಬರೆದಿದ್ದಾರೆ.
ಇದೇ ಮೊದಲು
ಇನ್ನು ಅಪರೂಪದ ಬೆಳವಣಿಗೆ ಎಂಬಂತೆ ಮಾಧ್ಯಮ ವರದಿಯನ್ನು ಪ್ರಧಾನಿ ಮೋದಿ ಸ್ವತಃ ಖಂಡಿಸಿದ್ದಾರೆ. ಇದು ಅಪರೂಪದ ಸಂಗತಿ ಎನ್ನಲಾಗಿದೆ.
ಏನದು ವರದಿ?
ವಿದೇಶ ಪ್ರವಾಸಗಳ ಮೇಲೆ ಸೆಸ್, ತೆರಿಗೆ ಅಥವಾ ಸರ್ಚಾರ್ಜ್ ವಿಧಿಸುವ ಪ್ರಸ್ತಾವನೆ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಿತ್ತು. ಈ ವರದಿ, ಕೆಲವೇ ದಿನಗಳ ಹಿಂದೆ ಮೋದಿ ದೇಶದಲ್ಲಿ ಮಿತವ್ಯಯ ಕ್ರಮಗಳನ್ನು ಅನುಸರಿಸಲು ಕರೆ ನೀಡಿದ ನಂತರ ಹೊರಬಂದಿದೆ.
ಜನರು ಒಂದು ವರ್ಷ ವಿದೇಶ ಪ್ರವಾಸ ತಪ್ಪಿಸಬೇಕು, ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡಬೇಕು, ಇಂಧನ ಬಳಕೆ ಕಡಿಮೆ ಮಾಡಬೇಕು, ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು, ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಬೇಕು, ನೈಸರ್ಗಿಕ ಕೃಷಿಗೆ ತಿರುಗಬೇಕು ಮತ್ತು ಚಿನ್ನ ಖರೀದಿಯನ್ನು ನಿಯಂತ್ರಿಸಬೇಕು ಎಂದು ಅವರು ಈ ಹಿಂದೆ ಕರೆ ನೀಡಿದ್ದರು.
ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವಿದೆ. ವಿದೇಶಿ ವಿನಿಮಯ ಉಳಿಸಲು ಹಾಗೂ ಪರಿಸರ ರಕ್ಷಣೆಗೆ ಪ್ರತೀ ಕುಟುಂಬ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ಸಾಗಬೇಕು. ರಾಸಾಯನಿಕ ರಸಗೊಬ್ಬರಗಳ ಆಮದು ದೇಶದ ಮೇಲೆ ಭಾರೀ ವಿದೇಶಿ ವಿನಿಮಯದ ಹೊರೆ ಉಂಟುಮಾಡುತ್ತಿದೆ. ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಅವರು ಮನವಿ ಮಾಡಿದರು ಎಂದು ಪ್ರಧಾನಿ ಒತ್ತಿಹೇಳಿದ್ದರು.
Advertisement