

ರಜೋರಿ: ಜಮ್ಮು ಮತ್ತು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಎರಡರಿಂದ ಮೂವರು ಭಯೋತ್ಪಾದಕರು ಅಡಗಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ. ಈ ಕುರಿತು ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
"ಇಂದು ಬೆಳಿಗ್ಗೆ 11.30 ರ ಸುಮಾರಿಗೆ ಪೊಲೀಸರು ಮತ್ತು ಸಿಆರ್‌ಪಿಎಫ್ ಜೊತೆಗೆ ನಡೆಸಿದ ಗುಪ್ತಚರ ಆಧಾರಿತ ಜಂಟಿ ಕಾರ್ಯಾಚರಣೆ ವೇಳೆ ರಜೋರಿಯ ಗಂಭೀರ್ ಮುಘ್ಲಾನ್ ನಲ್ಲಿ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲಾಯಿತು. ಬಳಿಕ ಭದ್ರತಾ ಪಡೆಗಳು ಗುಂಡಿನ ಚಕಮಕಿ ನಡೆಸಿವೆ.
ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, 'ಆಪ್ ಶೇರುವಾಲಿ' ಹೆಸರಿನಲ್ಲಿ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಹೇಳಿದೆ. ಡೋರಿಮಲ್-ಗಂಭೀರ್ ಮೊಘಲಾ ಬೆಲ್ಟ್‌ನಲ್ಲಿ ಶಂಕಿತ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು, ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡ ಪ್ರದೇಶವನ್ನು ಸುತ್ತುವರೆದು ವ್ಯಾಪಕ ಶೋಧ ನಡೆಸಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಕೊನೆಯ ಬಾರಿಗೆ ವರದಿಗಳು ಬಂದಾಗ ಕಾರ್ಯಾಚರಣೆ ಮುಂದುವರೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement