SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ಚುನಾವಣಾ ಆಯೋಗಕ್ಕೆ ಈ ರೀತಿಯ SIR ನಡೆಸುವ ಸಂಪೂರ್ಣ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
Supreme court (File photo)
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಎದ್ದಿದ್ದ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೆರೆ ಎಳೆದಿದೆ.

ಚುನಾವಣಾ ಆಯೋಗದ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಪೀಠ, SIR ಕ್ರಮವು ಕಾನೂನುಬದ್ಧವಾಗಿದ್ದು, ಇದು ಸ್ವಚ್ಛ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಹಕಾರಿಯಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ಚುನಾವಣಾ ಆಯೋಗಕ್ಕೆ ಈ ರೀತಿಯ SIR ನಡೆಸುವ ಸಂಪೂರ್ಣ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿಲ್ಲ. ಬಿಹಾರ ಮತದಾರರ ಪಟ್ಟಿಯ SIR ಪ್ರಕ್ರಿಯೆ ಜನಪ್ರತಿನಿಧಿತ್ವ ಕಾಯ್ದೆ (RP Act) ಅಥವಾ ಸಂವಿಧಾನದ ಯಾವುದೇ ವಿಧಿಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.

ತೀರ್ಪಿನಲ್ಲಿ, “ಮತದಾರರ ಪಟ್ಟಿಯ ಶುದ್ಧತೆ ಕಾಪಾಡುವುದು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಹೆಸರುಗಳನ್ನು ತೆಗೆದುಹಾಕುವ ಹಂತ ಹಂತದ ವಿಧಾನ, ಆಕ್ಷೇಪಣೆ ಸಲ್ಲಿಸಲು ಅವಕಾಶ ಹಾಗೂ ಇತರ ಭದ್ರತಾ ಕ್ರಮಗಳು ಈ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಏಕಪಕ್ಷೀಯವಲ್ಲದಂತಾಗಿಸುತ್ತವೆ ಎಂದು ಉಲ್ಲೇಖಿಸಿದೆ.

ಇದೇ ವೇಳೆ SIR ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಸುರಕ್ಷತಾ ಕ್ರಮಗಳು ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡಲು ಸಹಕಾರಿಯಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು.

Supreme court (File photo)
SIR ಹೆಸರಿನಲ್ಲಿ ಮತದಾರರ ಹೆಸರು ಡಿಲೀಟ್ ಆರೋಪ; war room ಸ್ಥಾಪಿಸಿದ ಕಾಂಗ್ರೆಸ್; ಎಚ್ಚರ ವಹಿಸುವಂತೆ 'ಕೈ' ನಾಯಕರಿಗೆ ಸಿದ್ದು-ಡಿಕೆಶಿ ಸೂಚನೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ.ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಜನವರಿ 29ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಸಂವಿಧಾನದ ಕಲಂ 326, ಜನಪ್ರತಿನಿಧಿತ್ವ ಕಾಯ್ದೆ 1950 ಹಾಗೂ ಮತದಾರರ ನೋಂದಣಿ ನಿಯಮಾವಳಿ 1960ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ SIR ನಡೆಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನು ಕೋರ್ಟ್ ಪರಿಶೀಲಿಸಿತು.

ಈ ಅರ್ಜಿಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL), ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಆರ್‌ಜೆಡಿ ನಾಯಕ ಮನೋಜ್ ಝಾ, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಸಲ್ಲಿಸಿದ್ದರು.

ಅರ್ಜಿದಾರರು, 2025ರ ಜೂನ್ 24ರಂದು ಚುನಾವಣಾ ಆಯೋಗ ಹೊರಡಿಸಿದ್ದ SIR ಆದೇಶವನ್ನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕ್ರಮವು ಸಂವಿಧಾನದ ಕಲಂ 14, 19, 21, 325 ಮತ್ತು 326ರ ಉಲ್ಲಂಘನೆ ಎಂದು ಅವರು ವಾದಿಸಿದ್ದರು.

ಆದರೆ, ಚುನಾವಣಾ ಆಯೋಗ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಮತದಾರರ ಪಟ್ಟಿಯ ಪಾರದರ್ಶಕತೆ ಮತ್ತು ನಿಖರತೆ ಕಾಪಾಡಲು ಈ ಪ್ರಕ್ರಿಯೆ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಇದಕ್ಕೂ ಮೊದಲು ಜುಲೈ 28ರಂದು ಸುಪ್ರೀಂ ಕೋರ್ಟ್, ಬಿಹಾರದಲ್ಲಿ SIR ಪ್ರಕ್ರಿಯೆಯ ನಂತರ ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದನ್ನು ತಡೆಯಲು ನಿರಾಕರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com