'ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಹೊರಬರಬಾರದು': ಟಾಟಾ ಮಂಡಳಿ ಸಂಘರ್ಷದ ಕುರಿತು ನಿರ್ಮಲಾ ಸೀತಾರಾಮನ್

ಸೋಮವಾರ ಮುಂಬೈನಲ್ಲಿ ಮಾತನಾಡಿದ ಸೀತಾರಾಮನ್, ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತದೆಯೇ ಅಥವಾ ಎರಡೂ ಪಕ್ಷಗಳನ್ನು ಮಾತುಕತೆಗೆ ಕರೆತರುವ ಪ್ರಯತ್ನ ಮಾಡುತ್ತದೆಯೇ ಎಂಬುದರ ಕುರಿತು ಯಾವುದೇ ಸುಳಿವು ನೀಡಲಿಲ್ಲ.
Nirmala Sitharaman
ನಿರ್ಮಲಾ ಸೀತಾರಾಮನ್ online desk
Updated on: 

ಟಾಟಾ ಸನ್ಸ್ ಮತ್ತು ಅದರ ಅತಿದೊಡ್ಡ ಷೇರುದಾರರಾದ ಟಾಟಾ ಟ್ರಸ್ಟ್ಸ್ ನಡುವಿನ ವಿವಾದವು ಭಾರತೀಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ಬದಲು, ಮುಚ್ಚಿದ ಬಾಗಿಲ ಹಿಂದೆ (ಖಾಸಗಿಯಾಗಿ) ಬಗೆಹರಿಸಿಕೊಳ್ಳುವಂತೆ ಟಾಟಾ ಸಮೂಹದ ನಾಯಕತ್ವಕ್ಕೆ ಸಲಹೆ ನೀಡಿದ್ದಾರೆ.

ಸೋಮವಾರ ಮುಂಬೈನಲ್ಲಿ ಮಾತನಾಡಿದ ಸೀತಾರಾಮನ್, ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸುತ್ತದೆಯೇ ಅಥವಾ ಎರಡೂ ಪಕ್ಷಗಳನ್ನು ಮಾತುಕತೆಗೆ ಕರೆತರುವ ಪ್ರಯತ್ನ ಮಾಡುತ್ತದೆಯೇ ಎಂಬುದರ ಕುರಿತು ಯಾವುದೇ ಸುಳಿವು ನೀಡಲಿಲ್ಲ. ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಂಬಂಧಪಟ್ಟವರಲ್ಲಿ ವ್ಯವಹಾರಿಕ ಪ್ರಬುದ್ಧತೆ ಮತ್ತು ಸೌಹಾರ್ದಯುತ ಮನೋಭಾವದ ಅಗತ್ಯವಿದೆ ಎಂದು ಅವರು ಹೇಳಿದರು.

"ಇವು ಅತ್ಯಂತ ಸೂಕ್ಷ್ಮ ವಿಷಯಗಳು ಎಂದು ನಾನು ಭಾವಿಸುತ್ತೇನೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ವಾಣಿಜ್ಯ ಮತ್ತು ವ್ಯವಹಾರಿಕ ಪ್ರಬುದ್ಧತೆಯ ಅಗತ್ಯವಿರುತ್ತದೆ. ಜೊತೆಗೆ, ಪರಸ್ಪರ ಸೌಹಾರ್ದಯುತ ಸಂಬಂಧವೂ ಮುಖ್ಯವಾಗುತ್ತದೆ. ಆದ್ದರಿಂದ, ವಿಷಯ ಎಷ್ಟೇ ಗಂಭೀರವಾಗಿದ್ದರೂ, ನಾನು ತಕ್ಷಣವೇ ಏನನ್ನೂ ಹೇಳಲು ಬಯಸುವುದಿಲ್ಲ. ಟಾಟಾ ಬ್ರಾಂಡ್‌ನ ಮೌಲ್ಯ ನನಗೆ ತಿಳಿದಿದೆ; ಟಾಟಾವನ್ನು ಜಾಗತಿಕ ಮಟ್ಟದ ಬೃಹತ್ ಬ್ರಾಂಡ್ ಆಗಿ ರೂಪಿಸುವಲ್ಲಿ ಪಾರ್ಸಿ ಸಮುದಾಯ ನೀಡಿರುವ ಕೊಡುಗೆಯೂ ನನಗೆ ಗೊತ್ತು," ಎಂದು ಹಣಕಾಸು ಸಚಿವರು ಹೇಳಿದರು.

ತಮ್ಮ ಭಿನ್ನಾಭಿಪ್ರಾಯಗಳು ಸಾರ್ವಜನಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಬದಲು, ಎರಡೂ ಪಕ್ಷಗಳು ಪರಸ್ಪರ ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

"ಟಾಟಾ ಸಮೂಹವು ತೊಡಗಿಸಿಕೊಂಡಿರುವ ಚಟುವಟಿಕೆಗಳ ವ್ಯಾಪ್ತಿ ನನಗೆ ತಿಳಿದಿದೆ. ಇದು ಭಾರತೀಯ ಆರ್ಥಿಕತೆಯ ಅತ್ಯಂತ ನಿರ್ಣಾಯಕ ಭಾಗವಾಗಿದೆ, ಆದ್ದರಿಂದ ಈ ವಿಷಯವನ್ನು ಅವರು ಪರಸ್ಪರ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುವಂತೆ ನೋಡಿಕೊಳ್ಳಲು ಅವರು ಮಾತುಕತೆ ನಡೆಸಬೇಕು. ಇದು ಈ ರೀತಿ ಸಾರ್ವಜನಿಕವಾಗಿ ಹೊರಬರಬಾರದು. ಅವರ ನಾಯಕತ್ವದ ಪ್ರಬುದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಈ ವಿವಾದವು ಆದಷ್ಟು ಬೇಗ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ. ಇದೇ ನಮ್ಮ ಅಭಿಪ್ರಾಯ," ಎಂದು ಸೀತಾರಾಮನ್ ಹೇಳಿದರು.

Nirmala Sitharaman
ಟಾಟಾ ವಿವಾದ: ಅಮಿತ್‌ ಶಾ ಜೊತೆ ಸಭೆ ಏಕೆ? ಸರ್ಕಾರದ 'ಪರಮಾಪ್ತ ಉದ್ಯಮಿ' ಪ್ರವೇಶ ಯಾವಾಗ? ನಿರ್ಮಲಾ ಸೀತಾರಾಮನ್‌ಗೆ ರಾಹುಲ್‌ ಗಾಂಧಿ ವ್ಯಂಗ್ಯ ಪ್ರಶ್ನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X