

ಚಂಡೀಗಢ: ಮಾದಕವಸ್ತು ಪ್ರಕರಣದಲ್ಲಿ ಹಿಂದೂ ಧಾರ್ಮಿಕ ಮುಖಂಡ ಹಾಗೂ ಶಿವಸೇನಾ ನಾಯಕರೊಬ್ಬರನ್ನು ಬಂಧಿಸಲು ಪೊಲೀಸರು ನಡೆಸಿದ ಸಂಚನ್ನು ಹಿಡನ್ ಕ್ಯಾಮೆರಾ ವಿಡಿಯೋ ಮೂವಲ ಬಹಿರಂಗವಾಗಿದ್ದು, ಪಂಜಾಬ್ ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡು ಮಾಡಿದೆ.
ಪಂಜಾಬ್ ಪೊಲೀಸ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಒಬ್ಬರು, ಹಿಂದೂ ಧಾರ್ಮಿಕ ಮುಖಂಡ ಮಹಂತ್ ಕಾಶ್ಮೀರಿ ಗಿರಿ ಅವರ ಮನೆಯಲ್ಲಿ ಡ್ರಗ್ಸ್ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ್ದು, ಆ ದೃಶ್ಯ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ವಿಡಿಯೋದಲ್ಲಿ ಪೊಲೀಸ್ ದಾಳಿಗೆ ಸ್ವಲ್ಪ ಮೊದಲು ಹಾಸಿಗೆಯ ಕೆಳಗೆ ಹೆರಾಯಿನ್ ಇಡುತ್ತಿರುವುದನ್ನು ಕಾಣಬಹುದು. ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಲುಧಿಯಾನ ಜಿಲ್ಲೆಯ ಖನ್ನಾ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಸುಖ್‌ದೇವ್ ಸಿಂಗ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಖನ್ನಾ ಎಸ್‌ಎಸ್‌ಪಿ ಡಾ.ದರ್ಪಣ್ ಅಹ್ಲುವಾಲಿಯಾ ಅವರು ಎಎಸ್‌ಐ ಸುಖದೇವ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ದಾಳಿಯ ನಂತರ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿತರಾಗಿದ್ದ ಮಹಂತ್ ಕಾಶ್ಮೀರ ಗಿರಿ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಿದ್ದಾರೆ.
ಖನ್ನಾ ಪೊಲೀಸರು ಶಿವಸೇನಾ ನಾಯಕ, ಧಾರ್ಮಿಕ ಮುಖಂಡ ಮಹಂತ್ ಕಾಶ್ಮೀರಿ ಗಿರಿ ಅವರ ಮನೆಯಿಂದ ಹೆರಾಯಿನ್ ವಶಪಡಿಸಿಕೊಂಡು ಅವರನ್ನು ಬಂಧಿಸಿರುವುದಾಗಿ ಶನಿವಾರ ಹೇಳಿದ್ದರು. ಆದರೆ, ಇದರ ಬೆನ್ನಲ್ಲೇ ಗಿರಿ ಅವರ ಮನೆಯಲ್ಲಿದ್ದ ರಹಸ್ಯ ಕ್ಯಾಮೆರಾದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆದ ಸಿಸಿಟಿವಿ ದೃಶ್ಯದಲ್ಲಿ, ಸಾದಾ ಉಡುಪಿನಲ್ಲಿದ್ದ ಎಎಸ್‌ಐ ಸುಖ್‌ದೇವ್ ಸಿಂಗ್ ಕೊಠಡಿಗೆ ಬಂದು ಬೆಡ್ ಕೆಳಗೆ ಏನನ್ನೋ ಇಡುವುದು ಸ್ಪಷ್ಟವಾಗಿ ಕಂಡಿದೆ. ಅದಾದ ಬಳಿಕ ಸದರ್ ಠಾಣೆಯ ಎಸ್‌ಎಚ್‌ಒ ವಿಜಯಪಾಲ್ ಸಿಂಗ್ ಹಾಗೂ ಸಿಟಿ-2 ಎಸ್‌ಎಚ್‌ಒ ತರ್ವಿಂದರ್ ಕುಮಾರ್ ಬೇಡಿ ನೇತೃತ್ವದ ಪೊಲೀಸ್ ಪಡೆ ಸ್ಥಳಕ್ಕೆ ಬಂದಿದೆ. ಶೋಧ ನಡೆಸುವ ನೆಪದಲ್ಲಿ ಅದೇ ಬೆಡ್ ಕೆಳಗಿದ್ದ 30 ಗ್ರಾಂ ಹೆರಾಯಿನ್ ವಶಪಡಿಸಿಕೊಂಡು, ಗಿರಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಈ ಘಟನೆಯು ರಾಜ್ಯದಲ್ಲಿ ಎಎಪಿ ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿಗೂ ಕಾರಣವಾಗಿದೆ. ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರು ವಿಡಿಯೋ ಮತ್ತು ಪೊಲೀಸರ ನಡವಳಿಕೆಯ ಬಗ್ಗೆ ಭಗವಂತ್ ಮಾನ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
""ಕಾನೂನು ಮತ್ತು ಸುವ್ಯವಸ್ಥೆ"ಯ ಎಎಪಿ ಮಾದರಿಗೆ ಸುಸ್ವಾಗತ! ಖನ್ನಾ ಪೊಲೀಸ್ ಎಎಸ್‌ಐ ಮನೆಯೊಳಗೆ ಹಾಸಿಗೆಯ ಕೆಳಗೆ ಮಾದಕ ವಸ್ತುಗಳ ಪ್ಯಾಕೆಟ್ ಅನ್ನು ರಹಸ್ಯವಾಗಿ ಮರೆಮಾಡುತ್ತಿರುವುದು ಸಿಸಿಟಿವಿಯಲ್ಲಿ ಲೈವ್ ಆಗಿ ಸೆರೆಯಾಗಿದೆ! ಎಎಪಿ ಸರ್ಕಾರ ನಾಗರಿಕ ಸೇವೆಗಳನ್ನು ಮನೆಗೆ ತಲುಪಿಸುವ ಭರವಸೆ ನೀಡಿತ್ತು. ಆದರೆ ಅದರಲ್ಲಿ ನಾಗರಿಕರನ್ನು ಸಿಲುಕಿಸಲು ಪಂಜಾಬ್ ಪೊಲೀಸರು ಮನೆಗೆ ಡ್ರಗ್ಸ್ ತಲುಪಿಸುತ್ತಾರೆ ಎಂದು ಯಾರಿಗೆ ಗೊತ್ತು? ಎಂದು ಸುಖ್‌ಬೀರ್ ಸಿಂಗ್ ಬಾದಲ್ ಪ್ರಶ್ನಿಸಿದ್ದಾರೆ.