"ಕ್ಷುಲಕ ವಿಚಾರ": ನಟಿ ದಿಯಾ ಮಿರ್ಜಾ ವಿಡಿಯೋ ವಿವಾದ ತಳ್ಳಿಹಾಕಿದ ಫಡ್ನವೀಸ್; ಬಿಜೆಪಿ ಕ್ಷಮೆಯಾಚಿಸಲು ಕಾಂಗ್ರೆಸ್ ಆಗ್ರಹ!

ಬಿಎಂಸಿಯ ಪರಿಸರ ಸ್ನೇಹಿ ದೀಪಾವಳಿ ಅಭಿಯಾನದ ಭಾಗವಾಗಿದ್ದ ಈ ವಿಡಿಯೋದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುವ ಪಟಾಕಿಗಳನ್ನು ಬಳಸದಂತೆ ಜನರಿಗೆ ಮನವಿ ಮಾಡಲಾಗಿತ್ತು
Devendra Fadnavis, Dia Mirza
ಸಿಎಂ ದೇವೇಂದ್ರ ಫಡ್ನವೀಸ್, ನಟಿ ದಿಯಾ ಮಿರ್ಜಾ
Updated on: 

ಮುಂಬೈ: ನಟಿ ದಿಯಾ ಮಿರ್ಜಾ ಅವರ ಪಟಾಕಿ ವಿರೋಧಿ ಅಭಿಯಾನದ ವಿಡಿಯೋವನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಡಿಲೀಟ್ ಮಾಡಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇದನ್ನು ಕ್ಷುಲಕ ವಿಚಾರ ಎಂದು ತಳ್ಳಿಹಾಕಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಇತ್ತ ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ಕ್ಷಮೆಯಾಚಿಸಲು ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಮುಂಬೈ ಬಿಜೆಪಿ ಮುಖ್ಯಸ್ಥ ಅಮೀತ್ ಸತಮ್ ಅವರ ಆಕ್ಷೇಪ ಮತ್ತು ಮೇಯರ್ ರಿತು ತಾವ್ಡೆ, ನಟಿ ದಿಯಾ ಮಿರ್ಜಾ ಅವರನ್ನು "ಹಿಂದೂ ವಿರೋಧಿ" ಎಂದು ಕರೆದ ನಂತರ, ಬಿಎಂಸಿ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಮಿರ್ಜಾ ಅವರ ವಿಡಿಯೋವನ್ನು ತೆಗೆದುಹಾಕಿತು. ಇದು ಸೋಮವಾರ ವಿವಾದಕ್ಕೆ ಎಡೆಮಾಡಿಕೊಟ್ಟಿತು.

ವಿಡಿಯೋದಲ್ಲಿ ಏನಿದೆ? ಬಿಎಂಸಿಯ ಪರಿಸರ ಸ್ನೇಹಿ ದೀಪಾವಳಿ ಅಭಿಯಾನದ ಭಾಗವಾಗಿದ್ದ ಈ ವಿಡಿಯೋದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುವ ಪಟಾಕಿಗಳನ್ನು ಬಳಸದಂತೆ ಜನರಿಗೆ ಮನವಿ ಮಾಡಲಾಗಿತ್ತು. ಆದರೆ, ನಟಿಯರಾದ ಮಾಧುರಿ ದೀಕ್ಷಿತ್ ಮತ್ತು ನಿಶಿಗಂಧ ವಾಡ್, ಹಾಗೂ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರನ್ನೊಳಗೊಂಡ ಅಭಿಯಾನದ ವಿಡಿಯೋಗಳು ಬಿಎಂಸಿಯ 'ಎಕ್ಸ್' (X) ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಾಗೆಯೇ ಇವೆ.

ಬಾಂಬೆ ಹೈಕೋರ್ಟ್ ತರಾಟೆ! ಮಾಲಿನ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದ ಬಾಂಬೆ ಹೈಕೋರ್ಟ್, ಈ ವಿಷಯವನ್ನು ಸ್ವಯಂಪ್ರೇರಿತವಾಗಿ (suo motu) ತೆಗೆದುಕೊಂಡಿತು. ಈ ವಿವಾದದ ಬಗ್ಗೆ "ತೀವ್ರ ನೋವು ಮತ್ತು ಅಸಮಾಧಾನ" ವ್ಯಕ್ತಪಡಿಸಿದ ನ್ಯಾಯಾಲಯ, ಕೆಲವರು ವಿಶೇಷವಾಗಿ ಚುನಾಯಿತ ಪ್ರತಿನಿಧಿಗಳು, ತೋರಿದ ಸಂಕೀರ್ಣ ಮನಸ್ಥಿತಿಯನ್ನು (petty mindset) ಟೀಕಿಸಿತು. ಅಲ್ಲದೆ, ಮಿರ್ಜಾ ಅವರ ವಿಡಿಯೋವನ್ನು ಮತ್ತೆ ಅಪ್‌ಲೋಡ್ ಮಾಡುವಂತೆ ಬಿಎಂಸಿಗೆ ಸಲಹೆ ನೀಡಿತು. ಭಾರತವು ಒಂದು ಜಾತ್ಯತೀತ ರಾಷ್ಟ್ರ ಎಂಬುದನ್ನು ನ್ಯಾಯಾಲಯ ಸಂಬಂಧಪಟ್ಟವರಿಗೆ ನೆನಪಿಸಿತು.

ನ್ಯಾಯಾಲಯದ ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವೀಸ್, ಹೈಕೋರ್ಟ್ ಬಿಎಂಸಿಯನ್ನು ತರಾಟೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದರು. ಅಲ್ಲದೆ, ಈ ವಿವಾದವು ತನ್ನ ಮಟ್ಟದಲ್ಲಿ ಪರಿಗಣಿಸಬೇಕಾದ ವಿಷಯವೇ ಅಲ್ಲ ಎಂದು ಅವರು ಹೇಳಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೈಕೋರ್ಟ್ ಮುಂಬೈ ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ನನಗೆ ಅನ್ನಿಸುವುದಿಲ್ಲ. ಬಹುಶಃ ಅದು ಕೇವಲ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರಬಹುದು, ಏಕೆಂದರೆ ಈ ಪ್ರಕರಣವು ಸ್ವತಃ ಹೈಕೋರ್ಟ್‌ನ ಮುಂದೆ ಬಂದಿರಲೇ ಇಲ್ಲ. ಹೀಗಿರುವಾಗ, ಅವರನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಶ್ನೆ ಎಲ್ಲಿ ಬರುತ್ತದೆ? ಎಂದು ಪ್ರಶ್ನಿಸಿದರು.

ಮಿರ್ಜಾ ವಿಡಿಯೋ ಡಿಲೀಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್, ಇದು ಸ್ಥಳೀಯ ಆಡಳಿತ ಸಂಸ್ಥೆಯ (ನಗರ ಪಾಲಿಕೆ) ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಿದರು. "ಹೌದು, ಅದನ್ನು ಡಿಲೀಟ್ ಮಾಡಲಾಗಿದೆ. ಇದು ಮುಂಬೈ ಮಹಾನಗರ ಪಾಲಿಕೆಯ ಇಚ್ಛೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ನಿರ್ವಹಿಸುವಾಗ, ಏನನ್ನು ಉಳಿಸಿಕೊಳ್ಳಬೇಕು ಮತ್ತು ಏನನ್ನು ತೆಗೆದುಹಾಕಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಆ ಖಾತೆಯ ನಿರ್ವಾಹಕರಿಗೆ ಇರುತ್ತದೆ. ಅವರು ಹಾಗೆಯೇ ಮಾಡಿದ್ದಾರೆ ಎಂದು ಅವರು ಹೇಳಿದರು.

"ದಿಯಾ ಮಿರ್ಜಾ ಒಬ್ಬ ಉತ್ತಮ ನಟಿ ಆಗಿರಬಹುದು, ಆದರೆ ಅವರು ಭಾರತದ ದೊಡ್ಡ ನಾಯಕಿಯೇನೂ ಅಲ್ಲ. ಆದ್ದರಿಂದ, ಇದು ನನ್ನ ಮಟ್ಟದ ವಿಷಯವಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮಟ್ಟಕ್ಕೆ ತಕ್ಕ ವಿಷಯಗಳ ಬಗ್ಗೆ ನನ್ನನ್ನು ಪ್ರಶ್ನಿಸಿ," ಎಂದು ಫಡ್ನವೀಸ್ ಹೇಳಿದರು.

ಇದೇ ವೇಳೆ, ಹೈಕೋರ್ಟ್‌ನ ಅಭಿಪ್ರಾಯಗಳನ್ನು ಬಿಜೆಪಿ ನಾಯಕರಿಗೆ "ಚೆನ್ನಾಗಿ ಬಿದ್ದ ಚಾಟಿ ಏಟು ಎಂದು ಹೇಳಿರುವ ಕಾಂಗ್ರೆಸ್, ಬಿಜೆಪಿ ಕ್ಷಮೆಯಾಚಿಸಬೇಕೆಂದು ಮತ್ತು ವೀಡಿಯೊವನ್ನು ತೆಗೆದುಹಾಕಲು ಕಾರಣರಾದ ಬಿಎಂಸಿ (BMC) ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಮಾತನಾಡಿ, "ಅಮೀತ್ ಸತಮ್ ಸೇರಿದಂತೆ ದ್ವೇಷದ ರಾಜಕಾರಣದಲ್ಲಿ ತೊಡಗಿರುವ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ನಾಚಿಕೆ ಎಂಬುದು ಇದ್ದರೆ, ಅವರು ದೇಶದ ಕ್ಷಮೆ ಕೇಳಬೇಕು," ಎಂದು ಹೇಳಿದರು. ಈ ಕ್ರಮವು ಅಸಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಪುನರುಚ್ಚರಿಸಿದ ಅವರು, ವೀಡಿಯೊ ಡಿಲೀಟ್ ಆಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದ್ದು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೈಕೋರ್ಟ್ ಬಿಜೆಪಿ ನಾಯಕರಿಗೆ ಕಠಿಣವಾಗಿ ನೆನಪಿಸಿದೆ. ಇದು ನ್ಯಾಯಾಲಯ ಬಿಜೆಪಿ ನಾಯಕರಿಗೆ ಕೊಟ್ಟ ಚಾಟಿ ಏಟು ಎಂದಿದ್ದಾರೆ.

ಇದೇ ವೇಳೆ, ಬಿಜೆಪಿ ಶಾಸಕ ರಾಮ್ ಕದಮ್ ಅವರು ಮಿರ್ಜಾ ಅವರನ್ನು ಟೀಕಿಸಿದ್ದಾರೆ. ಸನಾತನ ಹಿಂದೂ ಸಂಪ್ರದಾಯಗಳ ಬಗ್ಗೆ ಅವರಿಗೆ ಎಷ್ಟರ ಮಟ್ಟಿಗೆ ಅರಿವಿದೆ ಎಂದು ಪ್ರಶ್ನಿಸಿರುವ ಅವರು, ತಮಗೆ ಅರಿವಿಲ್ಲದ ಧರ್ಮಗಳ ವಿಷಯದಲ್ಲಿ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

"ದಿಯಾ ಮಿರ್ಜಾ ಒಬ್ಬ ಪ್ರತಿಭಾವಂತ ಕಲಾವಿದೆ. ಅವರು ತಮ್ಮ ಕಲೆಯ ಬಗ್ಗೆ ಅಥವಾ ತಾವು ಅನುಸರಿಸುವ ಧರ್ಮದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಿದರೆ, ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಸನಾತನ ಹಿಂದೂ ಧರ್ಮದ ಬಗ್ಗೆ ಅವರಿಗೆ ಏನು ಗೊತ್ತು? ದೀಪಾವಳಿ ಎಂದರೆ ಕೇವಲ 10 ಜನರು ಒಗ್ಗೂಡಿ ಪಾರ್ಟಿ ಮಾಡುವುದಲ್ಲ. ದೀಪಾವಳಿ ಅಂದರೆ ಅದಲ್ಲ ಎಂದು ಕದಮ್ ಹೇಳಿದರು.

Devendra Fadnavis, Dia Mirza
ಭಾರತ ಒಂದು ಜಾತ್ಯತೀತ ರಾಷ್ಟ್ರ; ಪರಿಸರ ಕಾಳಜಿಗೆ ಧರ್ಮದ ಬಣ್ಣ ಬೇಡ ಎಂದ ಹೈಕೋರ್ಟ್: ದಿಯಾ ಮಿರ್ಜಾ ವಿಡಿಯೋ ರೀ-ಅಪ್‌ಲೋಡ್ ಮಾಡಲು ಆದೇಶ

ಹಿಂದೂ ಧರ್ಮವು ಅತ್ಯಂತ ಸಹಿಷ್ಣು ಧರ್ಮವಾಗಿದ್ದು, ಇತರರಿಗೆ ತೊಂದರೆಯಾಗದಂತೆ ಬದುಕುವುದು, ಇತರರ ಬಗ್ಗೆ ಕಾಳಜಿ ವಹಿಸುವುದು ಮತ್ತು ಯಾರಿಗೂ ನೋವುಂಟು ಮಾಡದಿರುವುದು ಇದರ ಮೂಲ ತತ್ವವಾಗಿದೆ ಎಂದು ಅವರು ಸೆಲೆಬ್ರಿಟಿಗಳು ಮತ್ತು ಚಲನಚಿತ್ರ ಕಲಾವಿದರು ತಮಗೆ ತಿಳಿದಿರುವ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು. ತಮಗೆ ಅರಿವಿಲ್ಲದ ಇತರ ಧರ್ಮಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇನು? ಇದನ್ನೇ ಸನಾತನ ಹಿಂದೂಗಳು ಪ್ರಶ್ನಿಸುತ್ತಿದ್ದಾರೆ ಎಂದು ಶಾಸಕರು ಕದಮ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X